ಥಾಮಸ್ ಕಪ್ ಬಾಡ್ಮಿಂಟನ್: ಇತಿಹಾಸ ನಿರ್ಮಿಸಿದ ಭಾರತ

Prasthutha|

ಬ್ಯಾಂಕಾಕ್‌: ಥಾಯ್ಲೆಂಡ್‌ನ ಬ್ಯಾಂಕಾಕ್‌ನ ಇಂಪ್ಯಾಕ್ಟ್ ಅರೆನಾದಲ್ಲಿ ಭಾನುವಾರ ನಡೆದ ಥಾಮಸ್ ಕಪ್ ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು ದಾಖಲಿಸಿ ಭಾರತೀಯ ಪುರುಷರ ತಂಡ ಪ್ರಥಮ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

- Advertisement -

ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ದಾಖಲೆ ಬರೆದಿದೆ.

14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸಿದ ನಂತರ ಪ್ರಥಮ ಬಾರಿಗೆ ಥಾಮಸ್ ಕಪ್ ಪ್ರಶಸ್ತಿಯನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತು.

- Advertisement -

ಕಿಡಂಬಿ ಶ್ರೀಕಾಂತ್ 21-15, 23-21 ನೇರ ಗೇಮ್‌ಗಳಲ್ಲಿ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿದರು. ಯಾವುದೇ ಪಂದ್ಯವನ್ನು ಕಳೆದುಕೊಳ್ಳದೆ ಭಾರತ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಕೊನೆಯ ಪಂದ್ಯಕ್ಕೂ ಮುನ್ನ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು 18-21, 23-21, 21-19 ರಿಂದ ಸೋಲಿಸಿದ ನಂತರ ಭಾರತ 2-0 ಮುನ್ನಡೆ ಸಾಧಿಸಿತ್ತು.

ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಆಂಥೋನಿ ಗಿಂಟಿಂಗ್ ಅವರನ್ನು ಸೋಲಿಸಿದ ನಂತರ ಲಕ್ಷ್ಯ ಸೇನ್ ಭಾರತಕ್ಕೆ 1-0 ಮುನ್ನಡೆ ನೀಡಿದ್ದರು. ಮೊದಲ ಸೆಟ್ ಅನ್ನು 8-21 ರಲ್ಲಿ ಕಳೆದುಕೊಂಡ ನಂತರ, ಸೇನ್ ಎರಡನೇ ಗೇಮ್‌ನಲ್ಲಿ ಗಮನಾರ್ಹವಾದ ಪುನರಾಗಮನ ಮಾಡಿದರು. ಒಂದು ಗಂಟೆ ಐದು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೇನ್ 8-21, 21-17, 21-16ರಲ್ಲಿ ಗಿಂಟಿಂಗ್ ಅವರನ್ನು ಸೋಲಿಸಿದರು. ಗಿಂಟಿಂಗ್ ಮೊದಲ ಗೇಮ್ ಅನ್ನು 21-8 ರಿಂದ ಗೆದ್ದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

“ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ! ಥಾಮಸ್ ಕಪ್ ಗೆದ್ದ ಭಾರತದಿಂದ ಇಡೀ ದೇಶವೇ ಸಂಭ್ರಮಿಸಿದೆ! ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

Join Whatsapp