ನವದೆಹಲಿ: ಭಾರತ-ಚೀನಾ ಗಡಿ ವಿವಾದದ ಬಗ್ಗೆ ಚರ್ಚೆಗೆ ಸರ್ಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಲಾಪ ಬಹಿಷ್ಕರಿಸಿ ವಿಪಕ್ಷಗಳು ಹೊರನಡೆದಿವೆ.
ಭಾರತ-ಚೀನಾ ಗಡಿಯಲ್ಲಿ ಡಿ.09 ರಂದು ನಡೆದ ಘರ್ಷಣೆಯ ವಿಷಯವಾಗಿ ಚರ್ಚೆ ನಡೆಸಲು ವಿಪಕ್ಷಗಳು ಸಂಸತ್ ಕಲಾಪದಲ್ಲಿ ಆಗ್ರಹಿಸಿದ್ದವು.
ರಾಜ್ಯಸಭೆಯ ವಿಪಕ್ಷ ನಾಯಕ ಹಾಗು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷಗಳು ಭಾರತದ ನೆಲದಲ್ಲಿ ಚೀನಾ ಆಕ್ರಮಣಶೀಲತೆ ಮತ್ತು ಅತಿಕ್ರಮಣದ ವಿಷಯವಾಗಿ ಸಂಸತ್ ನಲ್ಲಿ ಚರ್ಚೆ ನಡೆಸಲು ಒತ್ತಾಯಿಸಿದ್ದವು, ಆದರೆ ಉಪಸಭಾಪತಿ ಹರಿವಂಶ್ ಅವರು ಚರ್ಚೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ನೊಟೀಸ್ ಬಂದಿಲ್ಲ, ಆದ್ದರಿಂದ ಚರ್ಚೆಗೆ ಅವಕಾಶವಿಲ್ಲ ಎಂದಿದ್ದರು.
ತವಾಂಗ್ ಸೆಕ್ಟರ್’ನಲ್ಲಿ ನಡೆದ ಭಾರತ-ಚೀನಾ ಸಿಬ್ಬಂದಿಗಳ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಹೇಳಿಕೆಯಲ್ಲಿ ಗಡಿಗೆ ಸಂಬಂಧಿಸಿದ ವಾಸ್ತವ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ, ಘರ್ಷಣೆಯ ವಿಷಯದ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿದೆ. ಚೀನಾ ಖಾಲಿ ಜಾಗದಲ್ಲಿ ಸೇತುವೆಗಳನ್ನು ನಿರ್ಮಿಸಿದೆ ಎಂಬ ಮಾಹಿತಿ ಇದೆ, ಆರಂಭದಿಂದಲೂ ಪೂರ್ಣ ಮಾಹಿತಿ ಪಡೆಯುವುದಕ್ಕೆ ನಾವು ಶ್ರಮಿಸುತ್ತಿದ್ದೇವೆ, ದೇಶಕ್ಕೆ ಗಡಿಯಲ್ಲಿನ ಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು ಎಂದು ಎಂದು ವಿಪಕ್ಷ ನಾಯಕ ಖರ್ಗೆ ಆಗ್ರಹಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ. ತವಾಂಗ್ ಗಡಿ ತಂಟೆ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಪ್ರತಿ ಪಕ್ಷಗಳ ಸದಸ್ಯರು ಬುಧವಾರವೂ ಒತ್ತಾಯ ಮಾಡಿದರು.ಸರ್ಕಾರದ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ್ದರಿಂದ ಲೋಕ ಸಭೆ, ರಾಜ್ಯ ಸಭೆ ಎರಡರಲ್ಲೂ ಗೊಂದಲ ಗಲಾಟೆಗಳಾದವು. ಕೊನೆಗೆ ವಿರೋಧ ಪಕ್ಷದವರು ಕಲಾಪ ಬಹಿಷ್ಕರಿಸಿ ಘೋಷಣೆ ಕೂಗುತ್ತ ಹೊರ ನಡೆದರು.
ಗಡಿಯಲ್ಲಿ ಚೀನಾದ ಅತಿಕ್ರಮಣದ ಬಗ್ಗೆ ನಮಗೆಲ್ಲ ಸಂಪೂರ್ಣ ಮಾಹಿತಿ ಬೇಕಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಸಭೆಯಲ್ಲಿ ಒತ್ತಾಯ ಮಾಡಿದರು. ಸೇನೆಯು ದೇಶದ ರಕ್ಷಣೆಗೆ ನಿಂತಿದೆ, ಅದರ ಬಗ್ಗೆ ಇಲ್ಲಿ ತಪ್ಪು ಮಾಹಿತಿ ನೀಡುವ ನೀವು ಜನರಿಗೇನು ಸತ್ಯ ಹೇಳುತ್ತೀರಿ ಎಂದು ಅವರು ಕೇಳಿದರು.
ಸಭಾಪತಿಗೆ ಈ ಬಗ್ಗೆ ಯಾವುದೇ ನೋಟೀಸು ಬಂದಿಲ್ಲ ಎಂದು ಉಪ ಸಭಾಪತಿ ಹರಿವಂಶ್ ಹೇಳಿದರು. ಇದು ಗದ್ದಲಕ್ಕೆ ಕಾರಣವಾಗಿ ಪ್ರತಿಪಕ್ಷಗಳವರು ಆಳುವವರನ್ನು ಖಂಡಿಸಿ ಘೋಷಣೆ ಕೂಗಿದರು.
ಕೊನೆಗೆ ಕಾಂಗ್ರೆಸ್, ಎಡ ಪಕ್ಷಗಳವರು, ತೃಣಮೂಲ ಕಾಂಗ್ರೆಸ್, ಎನ್ ಸಿಪಿ, ಆರ್ ಜೆಡಿ, ಎಸ್ ಪಿ, ಜೆಎಂಎಂ, ಶಿವ ಸೇನೆಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.