ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸಲು ಫಿಲಿಪ್ಪೀನ್ಸ್ ನಿರ್ಧರಿಸಿದೆ.
ಇದು ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸಿದೆ. ಫಿಲಿಪ್ಪೀನ್ಸ್ ಮೂರು ಬ್ಯಾಟರಿ ಬ್ರಹ್ಮೋಸ್ ಕ್ಷಿಪಣಿಗಳಿಗೆ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ. ಒಂದು ಬ್ಯಾಟರಿಯಲ್ಲಿ 4 ರಿಂದ 6 ಕ್ಷಿಪಣಿಗಳಿವೆ. ಇದು 37.49 ಕೋಟಿ ಡಾಲರ್ (ಅಂದಾಜು 2774 ಕೋಟಿ ರೂ.) ನ ಒಪ್ಪಂದವಾಗಿದೆ. ಕ್ಷಿಪಣಿಯನ್ನು ಫಿಲಿಪ್ಪೀನ್ಸ್ ನ ಕರಾವಳಿ ರಕ್ಷಣಾ ರೆಜಿಮೆಂಟ್ ನಿಯೋಜಿಸಲಿದೆ. ಚೀನಾ ಫಿಲಿಪ್ಪೀನ್ಸ್ ಗೆ ಪ್ರಮುಖ ಭದ್ರತಾ ಬೆದರಿಕೆಯನ್ನು ಒಡ್ಡಿದೆ. ವಿಯೆಟ್ನಾಂ ಮತ್ತು ಚಿಲಿ ಕೂಡ ಬ್ರಹ್ಮೋಸ್ ಖರೀದಿಸಲು ಆಸಕ್ತಿ ತೋರಿವೆ ಎಂದು ತಿಳಿದುಬಂದಿದೆ.
ಭಾರತವು ವ್ಯೂಹಾತ್ಮಕವಾಗಿ ದೊಡ್ಡ ಮೌಲ್ಯದ ಆಯುಧವನ್ನು ರಫ್ತು ಮಾಡುವುದು ಇದೇ ಮೊದಲು. ಕಳೆದ ವರ್ಷ ಭಾರತವು 42 ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿ ಸುಮಾರು 8,500 ಕೋಟಿ ರೂ.ಗಳನ್ನು ಗಳಿಸಿತ್ತು. ಆದರೆ ಅವೆಲ್ಲವೂ ರೈಫಲ್, ಟಾರ್ಪೆಡೊ ಮದ್ದುಗುಂಡುಗಳು ಮತ್ತು ಶೆಲ್ ಗಳು, ಬೃಹತ್ ಶಸ್ತ್ರಾಸ್ತ್ರಗಳ ಬಿಡಿ ಭಾಗಗಳು ಮತ್ತು ಪ್ಯಾರಾಶೂಟ್ ನಂತಹ ಲಘು ಶಸ್ತ್ರಾಸ್ತ್ರಗಳಾಗಿವೆ. ಈ ಹಿಂದೆ ರಫ್ತು ಮಾಡಲಾದ ಬೃಹತ್ ಮಿಲಿಟರಿ ಸಾಮಾಗ್ರಿ ಹಿಂದೂಸ್ತಾನ್ ಏರೋನಾಟಿಕ್ಸ್ ಅಭಿವೃದ್ಧಿಪಡಿಸಿದ ಧ್ರುವ್ ಹೆಲಿಕಾಪ್ಟರ್ ಆಗಿತ್ತು.
ರಷ್ಯಾದ ಯುಕೋಸ್ ಕ್ಷಿಪಣಿಯ ಮೂಲ ವಿನ್ಯಾಸದಲ್ಲಿ ಭಾರತ ಮತ್ತು ರಷ್ಯಾ ಬ್ರಹ್ಮೋಸ್ ಅನ್ನು ಸಿದ್ಧಪಡಿಸಿವೆ. ಭಾರತದ ಕ್ಷಿಪಣಿ ರೂವಾರಿ, ಮಾಜಿ ರಾಷ್ಟ್ರಪತಿ ಎಪಿಜೆ. ಅಬ್ದುಲ್ ಕಲಾಂ ಅವರು ಈ ಜಂಟಿ ಉದ್ಯಮದ ಕಲ್ಪನೆಯ ಹಿಂದೆ ಇದ್ದರೂ, ನಾಗರ್ ಕೋವಿಲ್ ನಿವಾಸಿಯೂ ಬ್ರಹ್ಮೋಸ್ ಕಾರ್ಪೊರೇಷನ್ ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಮತ್ತು ಡಿಆರ್ ಡಿಒ ದ ಮಾಜಿ ಮುಖ್ಯ ನಿಯಂತ್ರಕ ಡಾ. ಎ. ಶಿವತಾಣು ಪಿಳ್ಳೈ ಅವರನ್ನು ಬ್ರಹ್ಮೋಸ್ ನ ಪಿತಾಮಹ ಎಂದು ಕರೆಯಲಾಗುತ್ತದೆ. ಕ್ಷಿಪಣಿಯ ಪ್ರಸ್ತುತ ಆವೃತ್ತಿಗಳಲ್ಲಿ ಹೆಚ್ಚಿನವು ಅವರ ನಾಯಕತ್ವದಲ್ಲಿ ಅಭಿವೃದ್ಧಿಪಡಿಸಲ್ಪಟ್ಟವುಗಳಾಗಿವೆ. ಈ ಕ್ಷಿಪಣಿಗೆ ಬ್ರಹ್ಮಪುತ್ರ ಮತ್ತು ಮಾಸ್ಕೋ ನದಿಗಳ ಹೆಸರಿಡಲಾಗಿದೆ. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹೆಸರು ಸೂಚಿಸಿದ್ದರು.