ವಿಜಯಪುರ: ಜಿಲ್ಲೆಯಲ್ಲಿ ಎರಡು ವರ್ಷದ ಮಗುವೊಂದು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಇಂದು ಸಂಜೆ ನಡೆದಿದ್ದು, ಕೊಳವೆ ಬಾವಿಗೆ ಬಿದ್ದಿರುವ ಮಗುವಿನ ರಕ್ಷಣೆಗಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಗುವಿನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಸಲಾಗಿದೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ತೆರೆದ ಕೊಳವೆ ಬಾವಿಗೆ ಮಗು ಬಿದ್ದಿದೆ. ಸಾತ್ವಿಕ್ ಮುಜಗೊಂಡ (2) ಅಪಾಯದಲ್ಲಿ ಸಿಲುಕಿರುವ ಮಗು.
ಮಗುವಿನ ವಯೋಮಾನಕ್ಕೆ ತಕ್ಕಂತೆ ಉಸಿರಾಟಕ್ಕೆ ಅಗತ್ಯವಾದ ಆಕ್ಸಿಜನ್ ಪೂರೈಕೆಗಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಅರ್ಚನಾ ನೇತೃತ್ವದಲ್ಲಿ ವೈದ್ಯರ ತಂಡ ಕರ್ತವ್ಯದಲ್ಲಿ ತೊಡಗಿದೆ. ಸ್ಥಳದಲ್ಲಿ ಆಂಬ್ಯುಲೆನ್ಸ್ ಸಿದ್ಧತೆಯಲ್ಲಿ ಇರಿಸಿಕೊಳ್ಳಲಾಗಿದೆ.
ಕೊಳವೆ ಬಾವಿಗೆ ಸಿಸಿ ಕೆಮೆರಾ ಬಿಡಲಾಗಿದ್ದು, ಅಧಿಕಾರಿಗಳು, ಕೆಮೆರಾದ ಆಧಾರದಲ್ಲಿ ಮಗು ಕೊಳವೆ ಬಾವಿಯಲ್ಲಿ 16 ಅಡಿ ಆಳದಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಸಿದ್ದಾರೆ. ಮಗು ಸಿಕ್ಕಿಕೊಂಡಿರುವ ಆಧಾರದಲ್ಲಿ ಮಗು ಇರುವ ಸ್ಥಳಕ್ಕೆ ರಕ್ಷಣೆಗಾಗಿ ತೆರಳಲು ಸುಮಾರು 20 ಅಡಿ ದೂರದಿಂದ ಸುರಂಗ ಕೊರೆಯಲು ಆರಂಭಿಸಿದ್ದಾರೆ.
ಜಮೀನಿನಲ್ಲಿ ಆಟವಾಡಲು ಹೋಗಿದ್ದ ವೇಳೆ ಸಾತ್ವಿಕ್ ಆಯತಪ್ಪಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ.
ಮಗುವಿನ ರಕ್ಷಣೆಗಾಗಿ ತುರ್ತಾಗಿ 2 ಜೆಸಿಬಿ ತರಿಸಿದ್ದು, 2 ಹಿಟಾಚಿಗಳನ್ನೂ ಬಳಸಲು ಯೋಜಿಸಲಾಗಿದೆ. ಹಿಟಾಚಿ ಮೂಲಕ ಸುರಂಗ ಮಾರ್ಗಕ್ಕಾಗಿ ತೆಗೆಯುವ ಮಣ್ಣನ್ನು ಸಾಗಿಸಲು 8 ಟ್ಯಾಕ್ಟರ್ ಬಳಸಾಗುತ್ತಿದೆ.
ಮಗುವಿಮ ಕುಟುಂಬದವರು ಲಚ್ಯಾಣ ಗ್ರಾಮದ ಹೊರ ವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಮಂಗಳವಾರ ಎರಡು ಕೊಳವೆ ಬಾವಿ ಕೊರೆಸಿದ್ದರು. 280 ಅಡಿ ಹಾಗೂ 350 ಅಡಿ ಆಳದಲ್ಲಿ ಕೊರೆಸಿದ ಎರಡು ಕೊಳವೆಬಾವಿಯಲ್ಲಿ ಒಂದರಲ್ಲಿ ನೀರು ಕಾಣಿಸಿಕೊಂಡಿತ್ತು. ವಿಫಲ ಕೊಳವೆ ಬಾವಿಗೆ ಕೇಸಿಂಗ್ ಹಾಕಿರಲಿಲ್ಲ, ಬಾವಿಯ ಬಾಯಿಯನ್ನೂ ಮುಚ್ಚಿರಲಿಲ್ಲ ಎನ್ನಲಾಗಿದೆ.