ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಪೊಲೀಸ್ ದೌರ್ಜನ್ಯ: ಕಾನೂನು ಹೋರಾಟಕ್ಕೆ ಮುಂದಾದ ಕ್ಯಾಂಪಸ್ ಫ್ರಂಟ್

Prasthutha|

ಬಾಗಲಕೋಟೆ: ಜಿಲ್ಲೆಯ ತೆರದಾಳ್ ಗ್ರಾಮದಲ್ಲಿ ಶುಕ್ರವಾರದಂದು ಕಾಲೇಜಿನಲ್ಲಿ ಟೋಪಿ ಹಾಕಿದ್ದಾನೆಂಬ ನೆಪದಲ್ಲಿ ಕಾಲೇಜಿನ ಪ್ರಾಂಶುಪಾಲ ಅಪ್ಪಣ್ಣ ಪೂಜಾರಿ ಕಾಲೇಜಿಗೆ ಪೊಲೀಸರನ್ನು ಕರೆಸಿ, ಮುಸ್ಲಿಂ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು ಕ್ಯಾಂಪಸ್ ಫ್ರಂಟ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್, ಹಿಜಾಬ್ ವಿಷಯವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ದಿನಾಂಕ 14-02-2022 ರಂದು ನ್ಯಾಯಾಲಯದ ಮಧ್ಯಂತರ ಆದೇಶದ ಪ್ರಕಾರ ಆಯಾ ಕಾಲೇಜಿನ ಆಡಳಿತ ಮಂಡಳಿಗಳಲ್ಲಿ ಸಮವಸ್ತ್ರದ ವಿಚಾರವಾಗಿ ನಿರ್ಧಾರವನ್ನು ಕೈಗೊಂಡಿದ್ದರೆ ಅಲ್ಲಿಗೆ ಯಾವುದೇ ಧಾರ್ಮಿಕ ಉಡುಗೆಗಳಿಗೆ ಅವಕಾಶವಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ. ಆದರೆ ಇದನ್ನು ದುರ್ವ್ಯಾಖ್ಯಾನಗೊಳಿಸಿ ಶಾಲೆ, ಪದವಿ ಕಾಲೇಜುಗಳಲ್ಲಿ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರನ್ನು ಕಾಲೇಜಿನ ಆವರಣದಿಂದ ನಿರ್ಬಂಧಿಸಿ ತರಗತಿಗೆ ಹಾಜರಾಗಲು ಅನುಮತಿ ನಿರಾಕರಿಸಲಾಗುತ್ತಿದೆ, ಇದರ ಮುಂದುವರೆದ ಭಾಗವೇ ಈ ತೆರೆದಾಳ್ ನಲ್ಲಿ ವಿದ್ಯಾರ್ಥಿಯ ಮೇಲಾಗಿರುವ ದೌರ್ಜನ್ಯ ಎಂದು ಅವರು ಆರೋಪಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಅಪ್ಪಣ್ಣ ಪೂಜಾರಿ ಮತ್ತು ತೆರದಾಳ್ PSI ರಾಜು ಬೀಳಗಿ, ಮಲ್ಲಿಕಾರ್ಜುನ್ ಕಾಂಚನ್, ಪಿ.ಹೆಚ್. ಘನಿ, SB ಕಲಾಟೆ, ಇನ್ನುಳಿದವರು ಸೇರಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಕೊರಳ ಪಟ್ಟಿ ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಹೋಗಿ ಅಮಾನುಷವಾಗಿ ಥಳಿಸಿದ್ದಾರೆ. ತಾವು ಮಾಡಿದ ದೌರ್ಜನ್ಯದಿಂದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಯಿಂದಲೇ ಮುಚ್ಚಳಿಕೆ ಬರೆಸಿಕೊಂಡು ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಯನ್ನು ಬೆದರಿಸಿ ಒಂದು ಸಾವಿರ ರೂಪಾಯಿಯನ್ನು ವಸೂಲಿ ಮಾಡಿದ್ದಾರೆ. ತದನಂತರ ವಿದ್ಯಾರ್ಥಿಯ ಮೇಲೆಯೇ ಸುಳ್ಳು ಪ್ರಕರಣವು ಸಹ ದಾಖಲಿಸಿದ್ದಾರೆ. ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯಕ್ಕೆ ವಿದ್ಯಾರ್ಥಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅವರು ಮಾಹಿತಿ ನೀಡಿದರು.
ಈ ರೀತಿಯ ಪೊಲೀಸ್ ದೌರ್ಜನ್ಯಗಳು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿವೆ. ಕಾನೂನಿನ ಪಾಲಕರಾದ ಪೊಲೀಸರು ಕಾನೂನನ್ನು ದುರುಪಯೋಗಿಸಿಕೊಂಡು ವಿದ್ಯಾರ್ಥಿಗಳ ಮೇಲೆ ನಡೆಸುತ್ತಿರುವ ಇಂತಹ ಹಿಂಸೆಗಳನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲೆಯ ಪೊಲೀಸರು ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಬೇಕು ಮತ್ತು ಇದು ಪ್ರಜಾಪ್ರಭುತ್ವ ದೇಶವೆಂಬುದು ಅರಿತುಕೊಳ್ಳಬೇಕು. ಇಂತಹ ಪೊಲೀಸರ ದಬ್ಬಾಳಿಕೆಯನ್ನು ಜಿಲ್ಲಾ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ತಕ್ಷಣ ತಪ್ಪಿತಸ್ಥ ಪೊಲೀಸರನ್ನು ಅಮನತುಗೊಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಇಂತಹ ದೌರ್ಜನ್ಯಗಳಿಗೆ ತೆರೆ ಎಳೆಯಬೇಕಾದರೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಎಚ್ಚರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್, ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್, ಜಿಲ್ಲಾ ಮುಖಂಡರಾದ ಇಮ್ರಾನ್ ಬಶೀರ್ ಉಪಸ್ಥಿತರಿದ್ದರು.

Join Whatsapp