ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆ ಘೋಷಣೆ ಮಾಡಿತು.
ಇಂದಿಗೆ ಒರೋಬ್ಬರಿ 15 ದಿನ ಕಳೆದಿದ್ದು ಕೋಟ್ಯಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್ಗಳನ್ನು ಬಳಸುತ್ತಿದ್ದು ರಾಜ್ಯದಲ್ಲಿರುವ ಸಾರಿಗೆ ನಿಗಮದ ಬಸ್ಸುಗಳು ಸಾಲುತ್ತಿಲ್ಲ. ಹೀಗಾಗಿ ನಾಲ್ಕೂ ಸಾರಿಗೆ ನಿಗಮಕ್ಕೆ ನಾಲ್ಕು ಸಾವಿರ ಹೊಸ ಬಸ್ ಖರೀದಿಗೆ ಚಿಂತನೆ ನಡೆದಿದೆ.
ನಾಲ್ಕು ಸಾರಿಗೆ ನಿಗಮಕ್ಕೆ ಬರಲಿದೆ ನಾಲ್ಕು ಸಾವಿರ ಹೊಸ ಬಸ್
ಕೆಎಸ್ಆರ್ಟಿಸಿಯಲ್ಲಿ ಈಗಾಗಲೇ 8116 ಬಸ್ಸುಗಳಿವೆ. ಬಿಎಂಟಿಸಿಯಲ್ಲಿ 6688, ವಾಯುವ್ಯ ಸಾರಿಗೆಯಲ್ಲಿ 4858 ಬಸ್ಸುಗಳು ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 4327 ಬಸ್ಗಳಿವೆ. ಅಂದ್ರೆ ಒಟ್ಟು ನಾಲ್ಕು ಸಾರಿಗೆ ನಿಗಮದಿಂದ 23,986 ಬಸ್ಸುಗಳಿವೆ. ಆದರೆ ರಾಜ್ಯದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಇಷ್ಟು ಬಸ್ಸುಗಳು ಸಾಲುವುದಿಲ್ಲ.
ಅಲ್ಲದೆ ಈಗಾಗಲೇ ಹತ್ತು ಲಕ್ಷಕ್ಕಿಂತ ಹೆಚ್ಚು ಕಿಮೀ ಸಂಚಾರ ಮಾಡಿರುವ ಬಸ್ಸುಗಳಿವೆ. ಆರ್ಟಿಓ ರೂಲ್ಸ್ ಪ್ರಕಾರ ಬಸ್ಸುಗಳು 8 ರಿಂದ 10 ಲಕ್ಷ ಕಿಮೀ ಮಾತ್ರ ಸಂಚಾರ ಮಾಡಬೇಕು. ಅದರ ಮೇಲೆ ಮಾಡಿದ್ರೆ ಅದನ್ನು ಗುಜರಿಗೆ ಹಾಕಬೇಕು. ಆದರೆ ನಾಲ್ಕು ನಿಗಮಗಳಲ್ಲಿ ಸುಮಾರು 3 ರಿಂದ 4 ಸಾವಿರ ಹಳೆಯ ಬಸ್ಸುಗಳಿದ್ದು ಅವುಗಳನ್ನು ಗುಜರಿಗೆ ಹಾಕಿ ಮತ್ತೆ ಹೊಸದಾಗಿ ನಾಲ್ಕು ಸಾವಿರ ಬಸ್ಸುಗಳನ್ನು ಸೇರಿಸಲು ತಯಾರಿ ನಡೆದಿದೆ.
ಇನ್ನು ಈ ವರ್ಷದಲ್ಲಿ ನಾಲ್ಕು ಸಾರಿಗೆ ನಿಗಮಗಳ ಪೈಕಿ 95% ನಾರ್ಮಲ್ ಹೊಸ ಬಸ್ಗಳು ಬರಲಿದ್ದು ಮಿಕ್ಕ 5 % ಮಲ್ಟಿ ಆಕ್ಸೆಲ್ ಹಾಗೂ ಡಬಲ್ ಡೆಕ್ಕರ್ ಬಸ್ಗಳು ಬರಲಿವೆ. ಇದರಲ್ಲಿ ಬಹುಪಾಲು ಬಿಎಂಟಿಸಿ, ಕೆಎಸ್ಆರ್ಟಿಸಿ ನಿಗಮಕ್ಕೆ ಸೇರಲಿವೆ.