ಹೆಚ್ಚಿದ ಕ್ರೈಂ: ಕೋಳಿ ಬಲಿ ನೀಡಿ ಶಾಂತಿ ಮಾಡಿಸಿದ ಅರಸೀಕೆರೆ ಪೊಲೀಸರು

Prasthutha|

►► ಎಸ್ಐ ಸೇರಿ ನಾಲ್ವರಿಗೆ ನೋಟಿಸ್ ಜಾರಿ ಮಾಡಿದ ಎಸ್ಪಿ

- Advertisement -

ಹಾಸನ: ಹೆಚ್ಚುತ್ತಿರುವ ಕ್ರೈಂ ತಡೆಯಲು ವಿಫಲರಾಗಿರುವ ಪೊಲೀಸರು ಅಪರಾಧ ತಡೆಗೆ ಕಠಿಣ ಕ್ರಮ ಕೈಗೊಳ್ಳುವ ಬದಲು ದೇವರಿಗೆ ಮೊರೆ ಹೋಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಸರಣಿ ಅಪಘಾತ, ಅನಾಹುತ ಹೆಚ್ಚಿದ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಕೋಳಿ ಬಲಿ ಕೊಡುವ ಶಾಂತಿ ಮಾಡಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಈ ವಿಷಯ ನೂತನ ಎಸ್ಪಿ ಹರಿರಾಂ ಶಂಕರ್‍ ಅವರ ಗಮನಕ್ಕೆ ಬಂದಿದ್ದು, ಇದೀಗ ಸಬ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್‍ ನೀಡಿದ್ದಾರೆ.


ಇತ್ತೀಚಿನ ದಿನದಲ್ಲಿ ಅಪಘಾತದಿಂದ ನಾಲ್ವರ ಸಾವು, ನೀರಿಗೆ ಬಿದ್ದು ವ್ಯಕ್ತಿ ಸಾವು, ಕಳವು ಪ್ರಕರಣ ಹೀಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಒಂದಿಷ್ಟು ಹೆಚ್ಚಿತ್ತು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಹಿರಿಯ ಅಧಿಕಾರಿಗಳಿಗೆ ಉತ್ತರಿಸುವುದು ಹೇಗೆ ಎಂದು ಚಿಂತಿಸಿದ ಕೆಲ ಪೊಲೀಸರು ಠಾಣೆಯಲ್ಲಿ ಕೋಳಿ ಬಲಿ ನೀಡಿ ಶಾಂತಿ ಮಾಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಡ್ಡದಾರಿಗೆ ಕೈ ಹಾಕಿದ್ದಾರೆ. ಇದು ಸರಕಾರಿ ಕಚೇರಿಯಲ್ಲಿ ಪ್ರಾಣಿ ಬಲಿ ನಿಷೇಧ ಕಾಯಿದೆ ಉಲ್ಲಂಘಿಸಿದಂತಾಗಿದ್ದು, ಇದನ್ನು ಪ್ರಶ್ನಿಸಿ ನೂತನ ಎಸ್ಪಿ ಹರಿರಾಮ್ ಶಂಕರ್ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದ್ದಾರೆ. ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿದ್ದಾರೆ.

- Advertisement -


ಹೊಸತಲ್ಲ !

ಕೆಲ ವರ್ಷದ ಹಿಂದೆ ವಾಸ್ತು ದೋಷದ ಕಾರಣ ಹಾಸನ ನಗರದ ಬಡಾವಣೆ ಪೊಲೀಸ್ ಠಾಣೆ ಪ್ರವೇಶ ದ್ವಾರವನ್ನು ಬದಲಿಸಿದ್ದ ಪೊಲೀಸರು ಟೀಕೆಗೊಳಗಾಗಿದ್ದರು. ಕೆಲ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಇಲ್ಲವೇ ಸಿಬ್ಬಂದಿ ಮೇಲೆ ಆರೋಪ ಬಂದು ಅಮಾನತು ಶಿಕ್ಷೆಗೆ ಒಳಗಾದಾಗ, ಇಲ್ಲವೇ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಹೆಚ್ಚಳವಾದಾಗ ಹಾಸನದ ಸುತ್ತಮುತ್ತ ಇರುವ ಪುರದಮ್ಮ, ಮಳಲಿಯಮ್ಮ ಮುಂತಾದ ದೇವರಿಗೆ ಮೊರೆ ಹೋಗುವುದು ಅಥವಾ ಠಾಣೆಯಲ್ಲೇ ಕದ್ದುಮುಚ್ಚಿ ಪ್ರಾಣಿ ಬಲಿ ನೀಡುವಂತೆ ಮೌಢ್ಯತೆಗೆ ಜೋತುಬೀಳುವುದು ಸಾಮಾನ್ಯವಾಗಿತ್ತು.


ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಕೋಳಿ ಬಲಿ ಪ್ರಕರಣ ಸಂಬಂಧ ಎಸ್ಐ ಸೇರಿ ನಾಲ್ವರು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಾಸನದ ನೂತನ ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.

Join Whatsapp