ಬೆಂಗಳೂರು: ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸಿ ಶೋಷಿಸುವ ಪ್ರಭುತ್ವದ ವಿರುದ್ಧ ಲಕ್ಷಾಂತರ ಕಾರ್ಮಿಕರು ನೂರಾರು ವರ್ಷಗಳಿಂದ ನಡೆಸಿದ ಹೋರಾಟದ ಫಲ ಕೆಲಸದ ನಿಗದಿತ ಅವಧಿ, ಕನಿಷ್ಠ ವೇತನ ಇತ್ಯಾದಿ ಕಾರ್ಮಿಕ ಕಾನೂನುಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಲಕ್ಷಾಂತರ ಕಾರ್ಮಿಕರ ತ್ಯಾಗ, ಬಲಿದಾನವನ್ನು ರಾಜ್ಯ ಸರಕಾರ ಗಾಳಿಗೆ ತೂರಿ ಕಾರ್ಖಾನೆ ಕಾರ್ಮಿಕರ ಕೆಲಸದ ಅವಧಿ 8 ಗಂಟೆಯಿಂದ 12 ಗಂಟೆಯವರೆಗೆ ತಿದ್ದುಪಡಿ ಮಾಡಿದ ರಾಜ್ಯ ಸರಕಾರದ ಈ ಕಾರ್ಮಿಕ ವಿರೋಧಿ ಧೋರಣೆ ಉಳ್ಳವರಿಗೆ ಮಣೆ ಹಾಕಿ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರವಾಗಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಫಝಲುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ತಿದ್ದುಪಡಿಯಿಂದ ಕಾರ್ಮಿಕರ ಮೇಲಾಗುವ ಪರಿಣಾಮಗಳ ಈ ಕೆಳಗಿನಂತೆ SDTU ಪಟ್ಟಿ ಮಾಡಿ ಪ್ರಶ್ನಿಸಿದೆ:
- ಕಾರ್ಮಿಕ ಪುರುಷ ಅಥವಾ ಮಹಿಳೆ ಅವರವರ ಕೆಲಸಕ್ಕೆ ಅನುಗುಣವಾಗಿ ಸತತ 12 ಗಂಟೆಗಳ ಕಾಲ ನಿಂತು ಅಥವಾ ಕೂತು ತನ್ನ ಶ್ರಮ ಶಕ್ತಿಯನ್ನು ನೀಡಲು ಸಾಧ್ಯವೇ?
- ಮಹಿಳೆಯ ತಿಂಗಳ ಸಹಜ ಪ್ರಕ್ರಿಯೆ ಸಂದರ್ಭದಲ್ಲಿ 12 ಗಂಟೆಗಳ ಕಾಲ ದುಡಿಯಲು ಸಾಧ್ಯವೇ?
- ಗರ್ಭಿಣಿಯಾವಸ್ಥೆಯಲ್ಲಿ ಮಹಿಳೆ 12 ಗಂಟೆ ದುಡಿಯಲು ಸಾಧ್ಯವೇ?
- ಮಗುವಿಗೆ ತಾಯಿಯ ಆರೈಕೆ ಬಹು ಮುಖ್ಯವಾದ ಸಮಯದಲ್ಲಿ ಮಹಿಳೆ ಮಕ್ಕಳಿಂದ 12 ಗಂಟೆ ದೂರವಾಗಿರಲು ಸಾಧ್ಯವೇ?
ಈ ಪ್ರಶ್ನೆಗಳಿಗೆ ಸರಕಾರದ ಅಧಿಕೃತರು ಉತ್ತರ ನೀಡಬೇಕಾಗಿದೆ. ಮಾತ್ರವಲ್ಲ ದೇಶದ ಅಭಿವೃದ್ಧಿಯಲ್ಲಿ ಶ್ರಮಿಸುವ ಶ್ರಮಿಕರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರದಿಂದ ಸರಕಾರ ಹಿಂದೆ ಸರಿದು ಅವರ ಅವಕಾಶಗಳು ಮತ್ತು ಹಕ್ಕುಗಳನ್ನು ಸಂರಕ್ಷಿಸಲು ಕಾರ್ಯಯೋಜನೆ ರೂಪಿಸಬೇಕೆಂದು ಫಝಲುಲ್ಲಾ ಒತ್ತಾಯಿಸಿದ್ದಾರೆ.