►‘ಅಧ್ಯಕ್ಷ ಪೀಠಕ್ಕೆ ಪೇಪರ್ ಎಸೆದದ್ದು ಸರಿಯಲ್ಲ’
ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ನಡೆದ ಘಟನೆ ನಾವೆಲ್ಲ ತಲೆ ತಗ್ಗಿಸುವಂತಹ ಘಟನೆ ಅಂತ ಮಾಜಿ ಸಚಿವರೂ ಆಗಿರುವ JDS ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ವಿಧಾನಸಭೆಯಲ್ಲಿ ನಡೆದ ಅಂತಹ ಘಟನೆ ನಡೆಯಬಾರದಿತ್ತು. ಎಲ್ಲರು ಭಾಷಣ ಮಾಡ್ತಾರೆ, ಯಾರೂ ಹಾಗೆ ನಡೆದುಕೊಳ್ಳಲ್ಲ. ಕೆಂಗಲ್ ಹನುಮಂತಯ್ಯ ಕೊಟ್ಟಿರೋ ವಿಧಾನಸೌಧ ಬಹಳ ಪವಿತ್ರವಾದದ್ದು ಅಂತ ತಲೆ ಬಾಗಿ ಒಳಗೆ ಬರ್ತೀವಿ. ನಾವು ಶಿಸ್ತಿನಿಂದ, ಸಭ್ಯತೆಯಿಂದ ನಡೆದುಕೊಳ್ಳಬೇಕು ಅಂತ ನಿಯಮ ಇದೆ, ಮನಸ್ಸಿನಲ್ಲಿದೆ. ಆದ್ರೆ ಯಾರೂ ಅದನ್ನ ಪಾಲನೆ ಮಾಡ್ತಿಲ್ಲ ಅಂತ ವಿಷಾದ ವ್ಯಕ್ತಪಡಿಸಿದರು.
ಸುದೀರ್ಘ ಅನುಭವ ಇರೋ ಮಂತ್ರಿಗಳು, ಶಾಸಕರು, ಮಾಜಿ ಮಂತ್ರಿಗಳು ಇದ್ದಾರೆ. ನಿನ್ನೆ ನಡೆದ ಘಟನೆ ನಾವೆಲ್ಲ ತಲೆ ತಗ್ಗಿಸುವ ಘಟನೆ. ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಏನೇ ಇದ್ದರು ಮಾತಿನ ಮೂಲಕ ಚಾಟಿ ಬೀಸಬೇಕು. ಯತ್ನಾಳ್ ಗೆ ಸ್ವಲ್ಪ ಹೆಚ್ಚಾಗಿ ಅನಾಹುತ ಆಗಿದ್ದರೆ 2023 ಕೆಟ್ಟದಾಗಿ ದಾಖಲಾಗುತ್ತಿತ್ತು ಎಂದು ಜಿಟಿಡಿ ಹೇಳಿದರು.
ವಿಪಕ್ಷಗಳಾದ ನಾವುಗಳು ಕೂಡ ಸಭ್ಯತೆಯಿಂದ ನಡೆದುಕೊಳ್ಳಬೇಕು. ಅಧ್ಯಕ್ಷ ಪೀಠಕ್ಕೆ ಪೇಪರ್ ಎಸೆದದ್ದು ಸರಿಯಲ್ಲ. ಆಡಳಿತ ಪಕ್ಷಕ್ಕೆ 100% ಜವಾಬ್ದಾರಿ ಇದ್ದರೆ 50% ವಿಪಕ್ಷ ಜವಾಬ್ದಾರಿ ಇರುತ್ತೆ. ಮುಂದೆ ಇಂತಹ ಘಟನೆ ಆಗದಂತೆ ಎಲ್ಲರು ಎಚ್ಚರವಹಿಸಬೇಕು ಅಂತ ಸಲಹೆ ನೀಡಿದರು.