ಮಂಗಳೂರು: ಮತೀಯ ದ್ವೇಷದ ಕಾರಣ ಹತ್ಯೆಗೀಡಾದ ಅಮಾಯಕರ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಹಾಗೂ ಪರಿಹಾರ ನೀಡುವಲ್ಲಿ ಹಿಂದಿನ ಬಿಜೆಪಿ ಸರಕಾರ ಮಾಡಿರುವ ತಾರತಮ್ಯ ಧೋರಣೆಯ ಬಗ್ಗೆ ಸೂಕ್ತ ಕ್ರಮಕೈಗೊಂಡು ಫಾಝಿಲ್, ಮಸೂದ್ ಮತ್ತು ಜಲೀಲ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಉಪ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಆಗ್ರಹಿಸಿದ್ದಾರೆ.
ದೀಪಕ್ ರಾವ್, ಶರತ್ ಮಡಿವಾಳ, ಪ್ರವೀಣ್ ನೆಟ್ಟಾರ್, ಮಸೂದ್, ಫಾಝಿಲ್, ಜಲೀಲ್ ಕೃಷ್ಣಾಪುರ, ದಿನೇಶ್ ಕನ್ಯಾಡಿ ಸಹಿತ ಮತೀಯ ದ್ವೇಷದ ಕಾರಣ ನಡೆದ ಅಮಾಯಕರ ಹತ್ಯೆಯ ಆರೋಪಿಗಳಿಗೆ ಮಾತ್ರವಲ್ಲ ಅದರೊಂದಿಗೆ ಇಂತಹ ಅಮಾನವೀಯ ಕೃತ್ಯದ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ, ಈ ಬಗ್ಗೆ ಎಸ್ ಐಟಿ ತನಿಖೆ ನಡೆಸುವಂತೆಯೂ ಸರಕಾರಕ್ಕೆ ಅವರು ಒತ್ತಾಯ ಮಾಡಿದ್ದಾರೆ.
ಇದಲ್ಲದೆ, ಕರಾವಳಿ ಭಾಗದಲ್ಲಿ ನಡೆದಿರುವ ಎಲ್ಲಾ ಕೋಮು ಪ್ರಕರಣಗಳ ತನಿಖೆಯಾಗಬೇಕು ಮತ್ತು ಮುಂದೆ ಸಮಾಜಘಾತುಕ ಶಕ್ತಿಗಳು ತಲೆ ಎತ್ತದಂತೆ ಬಿಗಿಯಾದ ಕಾನೂನು ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.