ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಧಾನಿ ಮೋದಿಯೊಂದಿಗೆ ಮುಕ್ತ ಟಿವಿ ಚರ್ಚೆಗೆ ಮುಂದಾದ ಪಾಕ್ ಪ್ರಧಾನಿ

Prasthutha|

ಇಸ್ಲಾಮಾಬಾದ್: ಎರಡು ನೆರಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮುಕ್ತ ಟಿವಿ ಚರ್ಚೆ ನಡೆಸಲು ಬಯಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

- Advertisement -

ರಷ್ಯಾಕ್ಕೆ ಎರಡು ದಿನ ಭೇಟಿಗಾಗಿ ಪ್ರಯಾಣ ಬೆಳೆಸಲಿರುವ ಮುನ್ನಾದಿನ ರಷ್ಯಾದ ಸರ್ಕಾರಿ ಟೆಲಿವಿಷನ್ ನೆಟ್ ವರ್ಕ್ ಆರ್.ಟಿ ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಈ ಮೇಲಿನ ಹೇಳಿಕೆ ನೀಡಿದ್ದಾರೆ.

ಸುದೀರ್ಘ ಎರಡು ದಶಕಗಳ ಬಳಿಕ ಪಾಕಿಸ್ತಾನಿ ಪ್ರಧಾನಿಯೊಬ್ಬರು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುತಿನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಮುಖ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಈ ಭೇಟಿ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

- Advertisement -

ಈ ವೇಳೆ ಮಾತನಾಡಿದ ಅವರು, ನರೇಂದ್ರ ಮೋದಿಯೊಂದಿಗೆ ಟಿವಿ ಚರ್ಚೆಯಲ್ಲಿ ಮುಕ್ತವಾಗಿ ಮಾತನಾಡಲು ಬಯಸುತ್ತೇನೆಂದು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಭಾರತದ ನಡುವಿನ ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿದರೆ ಉಪಖಂಡದ ಒಂದು ಶತಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದು ಇಮ್ರಾನ್ ಖಾನ್ ಒತ್ತಿ ಹೇಳಿದರು.

ಆ್ಯಂಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, 2018 ರಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ತಕ್ಷಣವೇ ಭಾರತಕ್ಕೆ ಭೇಟಿ ನೀಡಿ ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವಂತೆ ಭಾರತವನ್ನು ಆಗ್ರಹಿಸಿದ್ದಾಗಿ ತಿಳಿಸಿದ್ದಾರೆ.

ಆದರೆ ಅವರ ಮನವಿಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ ಎಂದು ವಿಷಾದಿಸಿದ್ದಾರೆ.

ಈ ನಡುವೆ ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಸಂಘರ್ಷಕ್ಕೆ “ಶಾಂತಿಯುತ ಪರಿಹಾರ” ದ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಮಿಲಿಟರಿ ಸಂಘರ್ಷಗಳು ಎಂದಿಗೂ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.



Join Whatsapp