►ಕರ್ನಾಟಕದ ಹಿತಾಸಕ್ತಿಗಳ ಪರ ಕನ್ನಡಿಗರು ಒಂದಾಗಿ ಹೋರಾಡಬೇಕು
ಮಂಗಳೂರು : ಹಿಂದಿ ಹೇರಿಕೆ ಮೂಲಕ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ, ಉತ್ತರ ಭಾರತದವರು ದಕ್ಷಿಣ ಭಾರತಕ್ಕೆ ಅನಿಯಂತ್ರಿತ ವಲಸೆ ಬರುತ್ತಿರುವುದರಿಂದ ಸ್ಥಳೀಯರ ಉದ್ಯೋಗಗಳಿಗೆ ಸಮಸ್ಯೆ ಆಗುತ್ತಿದೆ, ಜನಸಂಖ್ಯೆ ನಿಯಂತ್ರಣ ಮಾಡಿರುವುದರಿಂದ ರಾಜಕೀಯವಾಗಿ ಕರ್ನಾಟಕಕ್ಕೆ ಹಾನಿಯಾಗುತ್ತಿದೆ, ಪ್ರಬಲವಾಗಿದ್ದ ಕರ್ನಾಟಕ ರಾಜ್ಯ ಈಗ ದುರ್ಬಲವಾಗುತ್ತಿದೆ, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ನಾವು ಪ್ರಶ್ನಿಸಿ ಅದರ ವಿರುದ್ಧ ಹೋರಾಡದಿದ್ದರೆ ನಮಗೆ ಉಳಿಗಾವಿಲ್ಲ ಎಂದು ಕೆಪಿಸಿಸಿ ವಕ್ತಾರೆ ಯು.ಟಿ ಆಯಿಷಾ ಫರ್ಝಾನಾ ಅಶ್ರಫ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದೇಶಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ಕರ್ನಾಟಕ. ಜನರು ಹಿಂದಿ ಹೇರಿಕೆ, ಅನಿಯಂತ್ರಿತ ವಲಸೆ, ತೆರಿಗೆ ಪಾಲು ಕಡಿತ ಮತ್ತು ಜನಸಂಖ್ಯೆಯ ವಿಚಾರದಲ್ಲಿ ಎರಡನೇ ಎರಡನೇ ದರ್ಜೆ ಪ್ರಜೆಗಳಾಗಿ ಬದುಕಬೇಕಾದ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶಪ್ರೇಮದ ಚೌಕಟ್ಟಿನಲ್ಲಿ ಹಿಂದಿಗೆ ಹೆಚ್ಚು ಮಹತ್ವ ನೀಡಿ ಹಿಂದಿ ಹೇರಿಕೆ ಮಾಡುತ್ತಿರುವುದರಿಂದ ಕನ್ನಡಿಗರು ಹಿಂದಿ ಕಲಿಯುವಂತಾಯಿತು, ಹೀಗಾಗಿ ಕರ್ನಾಟಕಕ್ಕೆ ಹಿಂದಿ ಭಾಷಿಕ ಜನರ ವಲಸೆ ಕೂಡ ಹೆಚ್ಚಾಗುತ್ತಿದೆ, ಹೀಗಿರುವಾಗಲೇ ಅಮಿತ್ ಶಾ ಅವರು ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ನಿಟ್ಟಿನಲ್ಲಿ ಸಮಿತಿ ರಚಿಸಿದ್ದಾರೆ, ಇದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನಾಹುತ ಎದುರಾಗಲಿದೆ, ಬಲವಂತದ ಹಿಂದಿ ಹೇರಿಕೆಯನ್ನು ಕನ್ನಡಿಗರು ಒಂದಾಗಿ ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.
ಜೀವನೋಪಾಯಕ್ಕಾಗಿ ಕರ್ನಾಟಕಕ್ಕೆ ವಲಸೆ ಬರುವ ಉತ್ತರದ ಜನರು ಕನ್ನಡ ಭಾಷೆಯನ್ನು ಕಲಿಯುತ್ತಿಲ್ಲ, ನಾವೇ ಅವರ ಭಾಷೆಯನ್ನು ಕಲಿತು ಮಾತನಾಡಬೇಕಾದ ಪರಿಸ್ಥಿತಿ ಇದೆ, ಕನ್ನಡಿಗರು ಹಿಂದಿ ಕಲಿಯುತ್ತಿರುವುದರಿಂದ ಹಿಂದಿ ಜನರ ವಲಸೆಯೂ ಹೆಚ್ಚಾಗುತ್ತಿದೆ ಎಂದರು.
ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿವೆ, ಆದರೆ ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿಲ್ಲ, ಉತ್ತರದ ಜನಸಂಖ್ಯಾ ಸ್ಫೋಟದಿಂದ ಒಕ್ಕೂಟ ವ್ಯವಸ್ಥೆಯ ಮೇಲೆ ಹಲ್ಲೆ ನಡೆದಿದೆ, ಮುಂದಿನ ದಿನಗಳಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾಗುವಾಗ ಉತ್ತರ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಪ್ರಮಾಣ ಹೆಚ್ಚಾಗಿ ಪೂರ್ತಿ ರಾಜಕೀಯ ಅಧಿಕಾರ ಉತ್ತರ ಭಾರತದ ಪಾಲಾಗಲಿದೆ, ದಕ್ಷಿಣದ ರಾಜ್ಯಗಳು ರಾಜಕೀಯವಾಗಿ ಅಂಗವೈಕಲ್ಯ ಆಗಲಿದೆ, ನಮ್ಮ ರಾಜ್ಯದಲ್ಲಿ ಜನನ ಪ್ರಮಾಣ ಕುಸಿದಿರುವುದರಿಂದ ಕರ್ನಾಟಕ ವೃದ್ಧಾಪ್ಯ ರಾಜ್ಯ ಆಗುವ ಸಾಧ್ಯತೆಯೂ ಇದೆ ಎಂದು ಎಚ್ವರಿಸಿದರು.
ಕರ್ನಾಟಕದ ಬಗ್ಗೆ ಮುನ್ನೋಟವುಳ್ಳ ಎಲ್ಲಾ ಜನರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸದಿದ್ರೆ ಕರ್ನಾಟಕಕ್ಕೆ ಉಳಿಗಾಲವಿಲ್ಲ ಎಂದರು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಅರಿವು ಮೂಡಿಸಬೇಕು, ಹೋರಾಟಗಳು ನಡೆಯಬೇಕು, ಜನಾಂದೋಲ ಆಗಬೇಕು, ಅದಕ್ಕಾಗಿ ಧರ್ಮ, ಜಾತಿ, ಪಕ್ಷಭೇದ ಮರೆತು ಕನ್ನಡಿಗರೆಲ್ಲರೂ ಸಾಮೂಹಿಕ ಜವಾಬ್ದಾರಿಯಿಂದ ಒಂದಾಗಿ ಹೋರಾಡಬೇಕು ಎಂದು ಅವರು ಕರೆ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೋಡಿಜಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.