ಬೆಂಗಳೂರು: ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ನರೇಂದ್ರ ಮೋದಿಯವರಿಗೆ ಹಿಂದಿಯಲ್ಲಿ ಸ್ವಾಗತ ಕೋರುವ ಬ್ಯಾನರ್ ಗಳನ್ನು ಹಾಕಿದ್ದ ಬಿಜೆಪಿ ಮೇಲೆ ಆಕ್ರೋಶಗೊಂಡಿರುವ ಕನ್ನಡ ಪರ ಸಂಘಟನೆಗಳು, ಬ್ಯಾನರ್ ಗಳಿಗೆ ಮಸಿ ಬಳಿದು ಪ್ರತಿಭಟಿಸಿವೆ.
ಸೋಮವಾರ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಶಾಸಕ, ತೋಟಗಾರಿಕಾ ಸಚಿವ ಮುನಿರತ್ನ ಪ್ರಧಾನಿಗೆ ಶುಭಕೋರುವ ಸಲುವಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದಿ ಭಾಷೆಯಲ್ಲಿರುವ ಬ್ಯಾನರ್ ಗಳನ್ನು ಹಾಕಿದ್ದರು. ಇದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಧರ್ಮೇಗೌಡ ನೇತೃತ್ವದಲ್ಲಿ ಹಿಂದಿ ಹೇರಿಕೆಯನ್ನು ಖಂಡಿಸಿ ಮಸಿ ಬಳಿಯಲಾಗಿದ್ದು, “ಕನ್ನಡ ನೆಲದಲ್ಲೇ ಕನ್ನಡಕ್ಕೆ ಅಪಮಾನ ಮಾಡುವ ಕಾರ್ಯವನ್ನು ಸಚಿವ ಮುನಿರತ್ನ ಮಾಡಿದ್ದಾರೆ. ಅದಕ್ಕಾಗಿ ನಾವು ಅಂತಹ ಫ್ಲೆಕ್ಸ್ ಗಳಿಗೆ ಮಸಿ ಬಳಿದು ಕನ್ನಡೀಕರಣಕ್ಕೆ ಒತ್ತಾಯ ಮಾಡುತ್ತಿದ್ದೇವೆ” ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಗೋ ಬ್ಯಾಕ್ ಮೋದಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.