►‘ಸಿಎಎ ಹಿಂದೆ ಅಲ್ಪಸಂಖ್ಯಾತರ ಕಡೆಗಣನೆ ಉದ್ದೇಶ’
ಕೋಲ್ಕತ್ತ: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಹೇಳಿದ್ದಾರೆ.
‘ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ ಈ ಬಾರಿ ಮಹತ್ವದ ಪಾತ್ರ ವಹಿಸಲಿವೆ. ಸಮಾಜವಾದಿ ಪಕ್ಷಕ್ಕೂ ತಕ್ಕಮಟ್ಟಿನ ನೆಲೆ ಇದ್ದು ಅದು ಹಾಗೆಯೇ ಮುಂದುವರಿಯಲಿದೆಯೇ ಎಂಬುದನ್ನು ಹೇಳಲಾಗದು. ಟಿಎಂಸಿಯ ಮಮತಾ, ಟಿರ್‌ಎಸ್‌ನ ಕೆ.ಚಂದ್ರಶೇಖರ ರಾವ್, ಎಎಪಿಯ ಅರವಿಂದ ಕೇಜ್ರವಾಲ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯ ಕರು ಕಳೆದ ಚುನಾವಣೆಯಲ್ಲಿ ‘ಫೆಡರಲ್ ಫ್ರೆಂಟ್’ ರಚಿಸಿ ಸಭೆ ನಡೆಸಿದ್ದರು. ಎನ್‌ಸಿಪಿ, ಜೆಡಿಯು ಹಾಗೂ ಕಾಂಗ್ರೆಸ್ ಕೂಡ ಹೊಸ ಮೈತ್ರಿಕೂಟಕ್ಕೆ ಕರೆ ನೀಡಿವೆ. ವಿರೋಧ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೆ ಬಿಜೆಪಿಯನ್ನು ಸೋಲಿಸಬಹುದು ಎಂಬುದಕ್ಕೆ ಈ ಪಕ್ಷಗಳು ಒತ್ತು ನೀಡಿವೆ’ ಎಂದು ಸೇನ್ ಹೇಳಿದ್ದಾರೆ.
ದೇಶದಲ್ಲಿ ಇಂದು ಬಿಜೆಪಿಗೆ ಪರ್ಯಾಯ ಇಲ್ಲ ಎಂದಾದರೆ ಅದು ತಪ್ಪಾಗುತ್ತದೆ. ಬಿಜೆಪಿಯು ಪ್ರಬಲ ಹಾಗೂ ಶಕ್ತಿಯುತ ಎಂದು ಅನಿಸಿದರೂ, ಅದಕ್ಕೂ ದೌರ್ಬಲ್ಯಗಳಿವೆ. ವಿರೋಧ ಪಕ್ಷಗಳಿಗೆ ಇಚ್ಚಾಶಕ್ತಿ ಬೇಕು’ ಎಂದು ಅವರು ಹೇಳಿದ್ದಾರೆ.
ಸಿಎಎ ಹಿಂದೆ ಅಲ್ಪಸಂಖ್ಯಾತರ ಕಡೆಗಣನೆ ಉದ್ದೇಶ
”ಪೌರತ್ವ (ತಿದ್ದುಪಡಿ) ಕಾಯ್ದೆ’ಯ (ಸಿಎಎ) ಜಾರಿಯಿಂದ ದೇಶದ ಆಗುಹೋಗುಗಳಲ್ಲಿ ಅಲ್ಪಸಂಖ್ಯಾತರ ಪಾತ್ರವು ಕುಗ್ಗಬಹುದು ಮತ್ತು ಬಹುಸಂಖ್ಯಾತ ಶಕ್ತಿಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ದೊರೆಯಬಹುದು ಎಂದು ಅಮರ್ತ್ಯ ಸೇನ್ ಅವರು ಅಭಿಪ್ರಾಯಪಟ್ಟಿದ್ದಾರೆ.
‘ದೇಶದಲ್ಲಿ ಅಲ್ಪಸಂಖ್ಯಾತರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಮಹತ್ವ ಸಿಗದಂತೆ ನೋಡಿಕೊಳ್ಳುವುದು ಸಿಎಎ ಜಾರಿಗೆ ತಂದ ಬಿಜೆಪಿ ಸರ್ಕಾರದ ಉದ್ದೇಶಗಳಲ್ಲಿ ಒಂದಾಗಿತ್ತು, ಹಿಂದೂ ಬಹುಸಂಖ್ಯಾತರಿಗೆ ಎಷ್ಟು ಮಹತ್ವ ನೀಡಲಾಗಿದೆಯೋ, ಅಲ್ಪಸಂಖ್ಯಾತರ ಪಾತ್ರವನ್ನು ಅಷ್ಟೇ ಕಡೆಗಣಿಸಲಾಗಿದೆ’ ಎಂದು ಹೇಳಿದ್ದಾರೆ.
‘ಬಾಂಗ್ಲಾದೇಶ ಅಥವಾ ಪಶ್ಚಿಮ ಬಂಗಾಳದ ಅಲ್ಪ- ಸಂಖ್ಯಾತರನ್ನು ಸ್ಥಳೀಯರು ಎಂದು ಪರಿಗಣಿಸುವ ಬದಲು ವಿದೇಶಿಯರು ಎಂದು ಘೋಷಿಸುವ ಮೂಲಕ ತಾರತಮ್ಯದ ಕ್ರಮ ಅನುಸರಿಸುವುದು ದುರದೃಷ್ಟಕರ, ಜಾತ್ಯತೀತ ಹಾಗೂ ಸಮಾನತೆಯ ದೇಶವಾಗಿರುವ ಭಾರತದಲ್ಲಿ ಇಂತಹ ಕ್ರಮಗಳಿಗೆ ಅರ್ಥವೇ ಇಲ್ಲ. ಮೂಲತಃ ಇದೊಂದು ಕೆಟ್ಟ ನಡೆ’ ಎಂದು ಸೇನ್ ಹೇಳಿದ್ದಾರೆ.