ಗುಂಡ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ; ಹಲ್ಲೆಗೊಳಗಾದ ಯುವಕನಿಂದ ದೂರು ದಾಖಲು, ಇಬ್ಬರ ಬಂಧನ

Prasthutha|

ಪುತ್ತೂರು: ವೇಣೂರು ಮೂಲದ ಅನ್ಯ ಕೋಮಿನ ಯುವತಿಯೊಂದಿಗೆ ತೆರಳುತ್ತಿದ್ದ ಪುತ್ತೂರು ಮೂಲದ ರಿಕ್ಷಾ ಚಾಲಕನ ಮೇಲೆ ಗುಂಡ್ಯ ಪರಿಸರದಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಯುವಕ ನೀಡಿದ್ದ ದೂರಿನನ್ವಯ ಹಲವು ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಾಲಚಂದ್ರ (35) ಹಾಗೂ ರಂಜಿತ್ (31) ಬಂಧಿತ ಆರೋಪಿಗಳು. ಇನ್ನುಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೇಣೂರು ಮೂಲದ ಅನ್ಯ ಕೋಮಿನ ಯುವತಿಯನ್ನು ಪುತ್ತೂರಿನ ಆಟೋ ರಿಕ್ಷಾ ಚಾಲಕ, ಸಂಪ್ಯದ ಆರ್ಯಾಪು ನಿವಾಸಿ ತನ್ನ ಆಟೋದಲ್ಲಿ ಗುಂಡ್ಯಕ್ಕೆ ಕರೆದೊಯ್ದಿದ್ದು, ಅಲ್ಲಿ ಸಂಘಪರಿವಾರದ ಕಾರ್ಯಕರ್ತರು ಅವರಿಬ್ಬರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ್ದರು.

- Advertisement -

ಈ ಬಗ್ಗೆ ದೂರು ನೀಡಿರುವ ಸಂತ್ರಸ್ತ ಯುವಕ, ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಆತನ ದೂರಿನನ್ವಯ ಸಂಘಪರಿವಾರದ ಕಾರ್ಯಕರ್ತರಾದ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್, ಬಾಲಚಂದ್ರ ಹಾಗೂ ರಂಜಿತ್ ಮತ್ತು ಇತರರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ಮಧ್ಯೆ ಬಂಧಿತ ಆರೋಪಿಗಳ ನೆರವಿಗೆ ಬಂದಿಲ್ಲ ಎಂದು ಆರೋಪಿಸಿ ಪುತ್ತೂರು ಶಾಸಕ ಸಂಜೀವ್ ಮಠಂದೂರು ವಿರುದ್ಧ ಸಂಘಪರಿವಾರದ ಕಾರ್ಯಕರ್ತರು ಅವರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಮುತ್ತಿಗೆ ಹಾಕಿ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.

ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ನೆರವಾಗುವಂತೆ ಶಾಸಕ ಸಂಜೀವ್ ಮಠಂದೂರ್ ಅವರಿಗೆ ಕರೆ ಮಾಡಿದಾಗ, ಊರಲ್ಲಿ ಇಲ್ಲ ಎಂಬ ಕಾರಣ ನೀಡಿ ತಲೆ ತಪ್ಪಿಸಿದ್ದರು. ಇದರಿಂದ ಕೆರಳಿದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಶಾಸಕ ಮಠಂದೂರ್ ಅವರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp