ಪರಿಷ್ಕೃತ ಪಠ್ಯದ ಮುದ್ರಣ ತಕ್ಷಣ ತಡೆಹಿಡಿದು ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ: ಸಿದ್ದರಾಮಯ್ಯ

Prasthutha|

►ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ ಮಾಡಿಸಿರುವುದು ಜನತೆಗೆ ಮಾಡಿದ ಅವಮಾನ

- Advertisement -

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಕೇಳಿ ಬರುತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದ ಮುದ್ರಣವನ್ನು ತಕ್ಷಣ ತಡೆಹಿಡಿದು ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಚಿಂತಕರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.

ಹತ್ತನೇ ತರಗತಿ ಪಠ್ಯದಲ್ಲಿ ಭಗತ್ ಸಿಂಗ್ , ನಾರಾಯಣ ಗುರು ಅವರ ಪಾಠಗಳನ್ನು ಕೈಬಿಟ್ಟು ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಅವರ ಭಾಷಣವನ್ನು ಸೇರಿಸಿದ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಸಿದ್ದರಾಮಯ್ಯ, ಕೂಡಲೇ ಪರಿಷ್ಕೃತ ಪಠ್ಯದ ಮುದ್ರಣವನ್ನು ತಡೆಹಿಡಿಯುವಂತೆ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

- Advertisement -

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳೇ ನಿಜವೆಂದಾದರೆ ಇದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಅನಗತ್ಯ ಊಹಾಪೋಹ ಮತ್ತು ಸಂಘರ್ಷಕ್ಕೆ ಅವಕಾಶ ನೀಡದೆ ಮುಖ್ಯಮಂತ್ರಿ ಬೊಮ್ಮಾಯಿ  ಅವರೇ ಖುದ್ದಾಗಿ ಸ್ಪಷ್ಟೀಕರಣ ನೀಡಬೇಕು. ರಾಜ್ಯದಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿರುವ ಸಾಹಿತಿಗಳು, ಚಿಂತಕರು ಮತ್ತು ಶಿಕ್ಷಣ ತಜ್ಞರಿರುವಾಗ ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ ಮಾಡಿಸಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ ಎಂದು ಸಿದ್ದು ಕಿಡಿಕಾರಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನೀಡಿರುವ ಕರಡನ್ನು ತಕ್ಷಣ ವಾಪಸು ಪಡೆದು, ಸಮಿತಿಯನ್ನು  ಬರ್ಖಾಸ್ತು ಗೊಳಿಸಬೇಕು ಮತ್ತು ನಾಡಿನ ಚಿಂತಕರು ಮತ್ತು ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ಧರ್ಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿ ಅದಕ್ಕೆ ಇರುವ ಪಾವಿತ್ರ್ಯವನ್ನು ಹಾಳುಗೆಡಹಿದ ಬಿಜೆಪಿ , ಈಗ ಎಳೆಯ ಮಕ್ಕಳ ಬುದ್ದಿಕೆಡಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ರಾಜಕೀಯದ ಅಖಾಡ ಮಾಡಲು ಹೊರಟಿರುವುದು ಖಂಡನೀಯ. ನಾಡಿನ ಪ್ರಜ್ಞಾವಂತರೆಲ್ಲರೂ ಇದರ ವಿರುದ್ಧ ದನಿ ಎತ್ತಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ತಮಗೆ ಸರಿಕಂಡ ವ್ಯಕ್ತಿಗಳನ್ನು ಆರಾಧಿಸುವ, ಅವರ ಚಿಂತನೆಗಳನ್ನು ಪ್ರಚಾರ ಮಾಡುವ ಅಧಿಕಾರವಿದೆ, ಆದರೆ ಶಿಕ್ಷಣ ಕ್ಷೇತ್ರವನ್ನು ಸ್ವಾರ್ಥ ರಾಜಕೀಯದ ರಾಡಿಯಿಂದ ಮಲಿನಗೊಳಿಸಬಾರದು. ಬುದ್ಧ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಜಾತಿ, ಧರ್ಮ, ಪಕ್ಷ, ಪಂಥಗಳನ್ನು ಮೀರಿದ ಚೇತನಗಳು. ಇವರನ್ನು ಸ್ವಾರ್ಥ ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು. ರಾಜಕೀಯ ದುರುದ್ದೇಶದಿಂದ ಮಾಡುವ ಈ ರೀತಿಯ ಅವಮಾನವನ್ನು ಸಹಿಸಲಾಗದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಹೆಡಗೆವಾರ್, ಗೋಲ್ವಾಲ್ಕರ್, ಗೋಡ್ಸೆ ಮೊದಲಾದವರನ್ನು ಬಿಜೆಪಿ  ತಮ್ಮ ಪಕ್ಷದ ವೇದಿಕೆಯಲ್ಲಿ ಮೆರೆದಾಡಿಸಲಿ, ಇವರ ಚಿತ್ರಗಳನ್ನೇ ಪ್ರದರ್ಶಿಸಿ ಚುನಾವಣೆಗಳಲ್ಲಿ ಮತಕೇಳಲಿ, ಪ್ರಜ್ಞಾವಂತ ಜನರು ತಪ್ಪು-ಸರಿಗಳನ್ನು ನಿರ್ಧರಿಸುತ್ತಾರೆ. ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಲಿಕೊಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.



Join Whatsapp