ಮಿತ್ತಬೈಲು ಮಸೀದಿ ಧರ್ಮ ಗುರುಗಳನ್ನು ಗುರಿಪಡಿಸಿ ಮಾರಕಾಸ್ತ್ರದೊಂದಿಗೆ ಆಗಮಿಸಿದ ದುಷ್ಕರ್ಮಿ: ಸಮಗ್ರ ತನಿಖೆಗೆ ಇಮಾಮ್ಸ್ ಕೌನ್ಸಿಲ್ ಆಗ್ರಹ

Prasthutha|

ಮಂಗಳೂರು: ಮಿತ್ತಬೈಲು ಮಸೀದಿಯ ಧರ್ಮ ಗುರುಗಳನ್ನು ಗುರಿಪಡಿಸಿ ದುಷ್ಕರ್ಮಿಯೋರ್ವ ಮಾರಕಾಸ್ತ್ರದೊಂದಿಗೆ ಆಗಮಿಸಿದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸಮಿತಿ  ಸದಸ್ಯ ಜಾಫರ್ ಸಾದಿಕ್ ಫೈಝಿ ಆಗ್ರಹಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿ. ಸಿ. ರೋಡ್ ಮಿತ್ತಬೈಲು ಕೇಂದ್ರ ಜುಮಾ ಮಸೀದಿಗೆ ಕಳೆದ ರಾತ್ರಿ ಕಲ್ಲಡ್ಕದ ಅನ್ಯ ಕೋಮಿನ ದುಷ್ಕರ್ಮಿಯೋರ್ವ ಮಾರಕಾಸ್ತ್ರಗಳೊಂದಿಗೆ ಆಗಮಿಸಿದ್ದು, ಅಲ್ಲಿದ್ದ ಕೆಲವರ ಸಮಯ ಪ್ರಜ್ಞೆ ಯಿಂದ  ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ. ಮುಸ್ಲಿಮ್ ವ್ಯಕ್ತಿಯಂತೆ ನಟಿಸಿ ಧರ್ಮ ಗುರುಗಳು ತಂಗಿರುವ ಕೊಠಡಿ ಕಡೆ ಹೋಗುವಾಗ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಅಲ್ಲಿದ್ದವರು ತಡೆದು ವಿಚಾರಣೆ ಮಾಡಿದಾಗ ಈತ ದುರುದ್ದೇಶದಿಂದ ಬಂದವನು ಎಂಬುದು ಖಚಿತವಾಗಿದೆ. ಆತ ಬಂದ ಸ್ಕೂಟರ್ ಪರಿಶೀಲಿಸಿದಾಗ ಮಾರಕಾಸ್ತ್ರ ಪತ್ತೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲಿಗೆ ನಾನು ಮಡಿಕೇರಿ ನಿವಾಸಿಯಾಗಿದ್ದು, ನನ್ನ ಹೆಸರು ವಿಶ್ವನಾಥ್. ನಾನು ಇಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದು ಎಂದು ಹೇಳಿದ್ದಾನೆ. ಬಳಿಕ ವಿಚಾರಣೆ ನಡೆಸಿದಾಗ ನಾನು ಕಲ್ಲಡ್ಕದ ಬಾಬು ಎಂದು ಹೇಳಿಕೆ ಕೊಟ್ಟಿದ್ದಾನೆ.  ಈ ಘಟನೆಯು ಕಾಸರಗೋಡು ಮಸೀದಿಯೊಳಗೆ ಆರೆಸ್ಸೆಸ್ ಕಾರ್ಯಕರ್ತರು ನುಗ್ಗಿ ರಿಯಾಝ್ ಮೌಲವಿ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದನ್ನು ನೆನಪಿಸುವಂತಿದೆ. ಪೊಲೀಸ್ ಇಲಾಖೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಈತನನ್ನು ಪ್ರಚೋದನೆ ನೀಡಿ ಕಳುಹಿಸಿಕೊಟ್ಟವರನ್ನು ಮತ್ತು ಇದರ ಹಿಂದಿರುವ ಷಡ್ಯಂತರವನ್ನು ಬಹಿರಂಗಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ  ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

- Advertisement -

 ಮಸೀದಿಯ ಆಡಳಿತ ಸಮಿತಿ ಮತ್ತು ಧರ್ಮ ಗುರುಗಳು ವಿಷಯದ ಗಾಂಭೀರ್ಯವನ್ನು ಅರ್ಥ ಮಾಡಿಕೊಂಡು ಎಚ್ಚರಿಕೆ ವಹಿಸಬೇಕು.  ಸೂಕ್ಷ್ಮ ಪ್ರದೇಶದಲ್ಲಿ ಇರುವ ಮಸೀದಿ, ಧಾರ್ಮಿಕ ಸ್ಥಳಗಳಿಗೆ ಸೂಕ್ತ  ಭದ್ರತೆಯ ವ್ಯವಸ್ಥೆಯನ್ನು ಜಿಲ್ಲಾ ಆಡಳಿತ  ಕಲ್ಪಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.



Join Whatsapp