ನವದೆಹಲಿ: ನೀಟ್-ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಸರ್ಕಾರದ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸ್ವಾಗತಿಸಿದೆ.
ನೀಟ್-ಯುಜಿಯಲ್ಲಿನ ಅಕ್ರಮಗಳನ್ನು ಗಂಭೀರವಾಗಿ ತನಿಖೆ ಮಾಡಲು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ್ದಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ ಎಂದು ಐಎಂಎ ಹೇಳಿಕೆಯಲ್ಲಿ ತಿಳಿಸಿದೆ.
ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಈ ಪ್ರಕರಣದ ಮೊದಲ ಎಫ್‌ಐಆರ್ ಕೂಡ ಸಿಬಿಐ ಭಾನುವಾರ ದಾಖಲಿಸಿದೆ. ಆಪಾದಿತ ಅಕ್ರಮಗಳ ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವುದಾಗಿ ಶಿಕ್ಷಣ ಸಚಿವಾಲಯ ಘೋಷಿಸಿದ ಒಂದು ದಿನದ ನಂತರ ಸಿಬಿಐನ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.