►ಒಂದು ವೇಳೆ ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರೂ ಕಾರಣರಲ್ಲ, ನನ್ನ ಆಯುಷ್ಯವೇ ಕಾರಣವಾಗಿರುತ್ತದೆ
ಮಂಗಳೂರು: ನನ್ನ ಮಾತು ನಡೆ ನುಡಿ ಸಾರ್ವಜನಿಕ ಜೀವನದಲ್ಲಿ ಯಾರಿಗಾದರೂ ನೋವಾಗಿದ್ದರೆ ನನ್ನ ತಾಯಿಯ ಸಮಕ್ಷಮ ಕ್ಷಮಿಸಬೇಕೆಂದು ಮನವಿ ಮಾಡಿ ಕೊಳ್ಳುತ್ತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ರಹೀಂ ಉಚ್ಚಿಲ್ ಕ್ಷಮೆಯಾಚಿಸಿದ್ದಾರೆ.
ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರಗಳು ನನಗೆ ಗನ್ ಮ್ಯಾನ್ ಮೂಲಕ ಭದ್ರತೆಯನ್ನು ಒದಗಿಸಿತ್ತು. ಇದಕ್ಕಾಗಿ ಈ ಅವಧಿಯಲ್ಲಿ ನನಗೆ ರಕ್ಷಣೆ ನೀಡಿದ ಎಲ್ಲಾ ಮುಖ್ಯ ಮಂತ್ರಿಗಳಿಗೂ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ರಹೀಂ ಉಚ್ಚಿಲ್ ಹೇಳಿದರು.
ಮಾರ್ಚ್ 15, 2012 ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಒಂದು ಸಂಘಟನೆಗೆ ಸೇರಿದ 7 ಮಂದಿಯ ತಂಡ ನನ್ನ ಮಾರಣಾಂತಿಕ ಕೊಲೆ ಯತ್ನ ನಡೆಸಿತು. ನೇರವಾಗಿ ಕಚೇರಿಗೆ ನುಗ್ಗಿ ಯದ್ವಾ ತದ್ವಾ ನನ್ನನ್ನು ಕೊಚ್ಚಿ ಹಾಕಿದ ಇಬ್ಬರು ಆರೋಪಿಗಳ ಆರೋಪ ಸಾಬೀತಾಗಿ ನಾಲ್ಕೂವರೆ ವರ್ಷ ಸಜೆ ನ್ಯಾಯಾಲಯ ನೀಡಿದೆ. ಇದನ್ನು ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್ ಮೆಟ್ಟಿಲೇರಿ ಅಲ್ಲಿ ತೀರ್ಪು ಬರುವ ಮೊದಲೇ ನನ್ನ ಗನ್ ಮ್ಯಾನ್ ಭದ್ರತೆ ವಾಪಾಸು ಪಡೆದುಕೊಂಡಿದೆ ಎಂದು ದೂರಿದರು.
ನನ್ನ ಕೊಲೆಗೆ ಯತ್ನಿಸಿದ ಆರೋಪಿಗಳು ನನ್ನ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ಮೊಕದ್ದಮೆ ಹಿಂಪಡೆಯಲು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದೆಡೆ ಬೆದರಿಕೆಯನ್ನು ನೀಡುತ್ತಿದ್ದಾರೆ. ಇತ್ತೀಚಿಗೆ ಒಂದು ದಿನ ನನಗೆ ನೀಡಲಾದ ಗನ್ ಮ್ಯಾನ್ ಅವರ ಬಾವ ತೀರಿಕೊಂಡಾಗ ತುರ್ತಾಗಿ ಅವರು ಇಲಾಖೆಯಲ್ಲಿ ಕೇಳದೆ ಕೇವಲ ಒಂದು ಗಂಟೆ ರಜೆ ಹಾಕಿದಾಗ ಗನ್ ಮ್ಯಾನ್ ಇಲ್ಲದೆ ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ನಡೆದಿದ್ದ ಪತ್ರಿಕಾಗೋಷ್ಠಿಗೆ ಮಂಗಳೂರಿನ ಪತ್ರಿಕಾ ಭವನಕ್ಕೆ ಬಂದು ಪತ್ರಿಕಾ ಗೋಷ್ಠಿ ಮುಗಿಸಿ ಹೊರಡುವಾಗ ಏಳು ಮಂದಿ ಶಸ್ತ್ರ ಸಜ್ಜಿತರಾಗಿ ಬಂದಿದ್ದು ಭಗವಂತನ ಕೃಪೆಯಿಂದ ಮಿತ್ರರೊಬ್ಬರ ಸ್ಕೂಟರ್ ಏರಿ ಕಮೀಷನರ್ ಕಚೇರಿಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದೆ. ಬಂದ ಆರೋಪಿಗಳ ಮುಖ ಪ್ರೆಸ್ ಕ್ಲಬ್’ನ ಹೊರಭಾಗದ ಸಿಸಿಟಿವಿಯಲ್ಲಿ ದಾಖಲಾಗಿದ್ದರೂ ಎಫ್’ಐಆರ್ ದಾಖಲಿಸಿದ ಬರ್ಕೆ ಪೊಲೀಸರು ಒಬ್ಬರನ್ನೂ ಬಂಧಿಸಿಲ್ಲ. ಪ್ರೆಸ್ ಕ್ಲಬ್ ನಲ್ಲಿದ್ದ ಕೆಲವು ಪತ್ರಕರ್ತರೂ ಸಾಕ್ಷ್ಯ ಹೇಳಿದ್ದರೂ ಈ ತನಕ ತನಿಖೆ ಸಮರ್ಪಕವಾಗಿ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನನಗೆ ಬಂದ ಹಲವಾರು ಬೆದರಿಕೆ ಕರೆಯನ್ನು ನಾನು ಗಣನೆಗೆ ತೆಗೆದು ಕೊಳ್ಳದಿದ್ದರೂ ಅತ್ಯಂತ ಗಂಭೀರವಾದ ಆಧಾರ ಸಹಿತವಾದ ಸುಮಾರು 30ಕ್ಕಿಂತಲೂ ಅಧಿಕ ದೂರು ಮಂಗಳೂರು ದಕ್ಷಿಣ ಠಾಣೆ, ಹುಬ್ಬಳ್ಳಿ ಮುಂತಾದ ಕಡೆ ದಾಖಲಾಗಿದೆ.
ಬೇರೆ ಬೇರೆ ಪೊಲೀಸ್ ಆಯುಕ್ತರ ನಿರ್ದೇಶನದಂತೆ ನನ್ನ ಕುರಿತು ಬೆದರಿಕೆ ಕರೆ ಸ್ವೀಕರಿಸಿದ ನನ್ನ ಗನ್ ಮ್ಯಾನ್ ಗಳೂ ವಾಯ್ಸ್ ಸಂದೇಶ ಸಹಿತ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಎಲ್ಲಾ ತನಿಖೆ ಪ್ರಗತಿಯಲ್ಲಿ ಇರುವಾಗಲೇ ನನ್ನ ಗನ್ ಮ್ಯಾನ್ ಭದ್ರತೆ ಹಿಂಪಡೆದಿದ್ದು ಆಶ್ಚರ್ಯ ಹಾಗೂ ಭಯವನ್ನುಂಟು ಮಾಡಿದೆ ಎಂದು ರಹೀಂ ಹೇಳಿದರು.
ನನ್ನ ವಿರುದ್ಧ ಒಂದೇ ಒಂದು ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ಇಲ್ಲ. ಒಂದು ರಾಜಕೀಯ ಸಿದ್ಧಾಂತದಲ್ಲಿ ಹಾಗೂ ಸಂಘದ ಜೊತೆ ಗುರುತಿಸಿದ ಕಾರಣಕ್ಕಾಗಿ ಕೊಲೆ ಯತ್ನ ನಡೆಸಲಾಯಿತು ಎಂದು ಆರೋಪಿಗಳು ನೀಡಿದ ಹೇಳಿಕೆ ಎಫ್ ಐ ಆರ್ ನಲ್ಲಿ ದಾಖಲಾಗಿದೆ. ಹೀಗಿದ್ದರೂ ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನೆಂದೂ ನಡೆದು ಕೊಂಡಿಲ್ಲ. ರಾಷ್ಟ್ರೀಯತೆಗೆ ಪೂರಕವಾದ ವಿಚಾರದಲ್ಲಿ ಟಿವಿ ಡಿಬೇಟ್ , ಭಾಷಣ, ಚರ್ಚೆ ನಡೆಸಿದ್ದೇನೆಯೇ ವಿನಃ ನನ್ನ ಸಮುದಾಯದ ವಿರುದ್ಧ ಅಥವಾ ಧರ್ಮದ ವಿರುದ್ಧ ಯಾರ ಮನ ನೋಯಿಸುವ ಕೆಲಸ ಮಾಡಿಲ್ಲ. ಹೀಗಿದ್ದರೂ ನನ್ನ ಹಳೆಯ ಭಾಷಣದ ತುಣುಕನ್ನು ಎಡಿಟ್ ಮಾಡಿ ಕೆಲವರು ವೈರಲ್ ಮಾಡುವ ಮೂಲಕ ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕುಟುಂಬದವರ ಸಲಹೆ ಮೇರೆಗೆ ಎಚ್ಚರಿಕೆಯ ಹೆಜ್ಜೆ ಇಡುತ್ತೇನೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ತೊರೆಯುವುದಿಲ್ಲ ಹಾಗೂ ನನಗೆ ಎರಡು ಬಾರಿ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಸ್ಥಾನ ನೀಡಿದ ಬಿಜೆಪಿಗೆ ಸದಾ ಚಿರಋಣಿಯಾಗಿದ್ದೇನೆ. ಇನ್ನೊಂದು ರಾಜಕೀಯ ಪಕ್ಷ ಸೇರುವುದಿಲ್ಲ. ಒಂದು ವೇಳೆ ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರೂ ಕಾರಣರಲ್ಲ. ನನ್ನ ಆಯುಷ್ಯವೇ ಕಾರಣವಾಗಿರುತ್ತದೆ. ಕಟುಕರು ನಿಷ್ಕರುಣೆಯಿಂದ ಕೊಚ್ಚಿ ಕೊಚ್ಚಿ ಹಾಕಿದಾಗ, ಕೋವಿಡ್ ಸಮಯದಲ್ಲಿ ಗಂಭೀರ ಚಿಂತಾಜನಕ ಸ್ಥಿತಿಯಲ್ಲಿ ತುರ್ತು ನಿಗಾ ಘಟಕದಲ್ಲಿ ಇದ್ದಾಗ, ಕಳೆದ ವರ್ಷ ಹೃದಯ ಸಂಬಂಧಿ ಗಂಭೀರ ಸಮಸ್ಯೆ ಕಾಣಿಸಿ ಕೊಂಡಾಗ ನಾನು ನಂಬುವ ನನ್ನ ಸೃಷ್ಟಿಕರ್ತ ನನಗೆ ಜೀವದಾನ ನೀಡಿದ್ದಾನೆ. ಆದ್ದರಿಂದ ಭಗವಂತ ಕಾಪಾಡುತ್ತಾನೆ ಎಂಬ ವಿಶ್ವಾಸ ನನ್ನದು. ನನ್ನ ಮಾತು ನಡೆ ನುಡಿ ಸಾರ್ವಜನಿಕ ಜೀವನದಲ್ಲಿ ಯಾರಿಗಾದರೂ ನೋವಾಗಿದ್ದರೆ ನನ್ನ ತಾಯಿಯ ಸಮಕ್ಷಮ ಕ್ಷಮಿಸಬೇಕೆಂದು ಮನವಿ ಮಾಡಿ ಕೊಳ್ಳುತ್ತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.