ನವದೆಹಲಿ: ಬ್ರಿಟನ್ ಮೂಲದ ಕೋವಿಶೀಲ್ಡ್ ಲಸಿಕೆಯ ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಾಗುವಂತಹ ಅಡ್ಡ ಪರಿಣಾಮ ಸೃಷ್ಟಿಸುತ್ತದೆ ಎಂದು ಕಂಪನಿ ಒಪ್ಪಿಕೊಂಡ ಬೆನ್ನಲ್ಲೇ, ಭಾರತದಲ್ಲಿ ಹೆಚ್ಚು ಜನರಿಗೆ ನೀಡಲಾದ ಕೋವ್ಯಾಕ್ಸಿನ್ ಲಸಿಕೆಯ ಅಡ್ಡ ಪರಿಣಾಮದ ಕುರಿತಂತೆ ಅಧ್ಯಯನವೊಂದು ಹೊರಬಿದ್ದಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಪಡೆದವರಲ್ಲಿ ಮೂರನೇ ಒಂದು ಭಾಗದಷ್ಟು ಜನರಿಗೆ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ(ಬಿಎಚ್‌ಯು) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿ ತಿಳಿಸಿದೆ.
ಅಧ್ಯಯನದಲ್ಲಿ ಪಾಲ್ಗೊಂಡಿದ್ದ 926 ಮಂದಿ ಪೈಕಿ ಶೇ 50ರಷ್ಟು ಜನರಲ್ಲಿ ಫಾಲೊ ಅಪ್ ಅವಧಿಯಲ್ಲಿ ಸೋಂಕು ಕಂಡುಬಂದಿದೆ. ಉಸಿರಾಟ ವ್ಯವಸ್ಥೆಯಲ್ಲಿ ಸೋಂಕು ಪತ್ತೆಯಾಗಿದೆ. ಗಂಟಲು ಕೆರೆತ, ಮೂಗು ಸೋರುವಿಕೆ ಕೆಮ್ಮು ಮುಂತಾದ ಲಕ್ಷಣ ಕಂಡುಬಂದಿವೆ ಎಂದು ಅಧ್ಯಯನ ಹೇಳಿದೆ.
ಶೇಕಡ 1ರಷ್ಟು ಪ್ರಕರಣಗಳಲ್ಲಿ ಪಾರ್ಶ್ವವಾಯು, ಗುಲ್ಲೈನ್-ಬರ್ರೆ ಸಿಂಡ್ರೋಮ್(ನರಗಳಿಗೆ ಸಂಬಂಧಿತ ಆರೋಗ್ಯ ಸಮಸ್ಯೆ) ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.
ಅಧ್ಯಯನದ ವರದಿಯು ಸ್ಟ್ರಿಂಜರ್ ನೇಚರ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.