ಬೆಂಗಳೂರು; ಧಾರವಾಡದ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಸೇರಿದ್ದ ಧಾರವಾಡ ತಾಲ್ಲೂಕಿನ ಮುಗದ್ ಗ್ರಾಮದ ಸರ್ವೋದಯ ಶಿಕ್ಷಣ ಟ್ರಸ್ಟಿನ ಶಾಲೆಯಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ. ಇದರ ಹಿಂದೆ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿದ್ದು, ಕೂಡಲೇ ಅವರನ್ನು ಸಭಾಪತಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ದಲಿತಪರ ಸಂಘಟನೆಗಳು ಒತ್ತಾಯಿಸಿವೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ ಮತ್ತು ಎಂ. ಗೋಪಿನಾಥ್, ಕರ್ನಾಟಕ ರಾಜ್ಯ ವಾಲ್ಮೀಕಿ ಮಹಾ ಪರಿಷತ್ ನ ರಾಜ್ಯಾಧ್ಯಕ್ಷ ಬಸವರಾಜ ನಾಯಕ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯದ ರಾಜ್ಯಾಧ್ಯಕ್ಷ ಎಂ ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ: ಎನ್. ಮೂರ್ತಿ ಮತ್ತಿತರರು ಸಭಾಪತಿ ವಿರುದ್ಧ ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ರಾಜ್ಯಪಾಲರ ನಂತರ ಪರಮೋಚ್ಛ ಸ್ಥಾನ ಹೊಂದಿರುವ ಹೊರಟ್ಟಿ ಅವರಿಂದ ವಿಧಾನಪರಿಷತ್ತಿನ ಗೌರವಕ್ಕೆ ಚ್ಯುತಿಯಾಗುತ್ತಿದೆ. ಸಭಾಪತಿ ಸ್ಥಾನದಲ್ಲಿರುವವರ ಮೇಲೆ ಎಫ್.ಐ.ಆರ್. ದಾಖಲಾಗಿದ್ದು, ಅವರು ಈ ಮಹತ್ವದ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ನೈತಿಕ ಹೊಣೆ ಹೊತ್ತು ಬಸವರಾಜ ಹೊರಟ್ಟಿಯವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಪಾಲರು ಸಭಾಪತಿ ಸ್ಥಾನದಿಂದ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಜನವರಿ 25 ರಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾ ಸಭಾದ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮೋಹನ ಗುಡಸಲಮನೆ, ಭರತ್ ಮಗದೂರು , ಪರಶುರಾಮ ಮತ್ತು ಇತರರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಅವರು ಕಾನೂನುಬಾಹಿರವಾಗಿ ನೇಮಕಗೊಂಡ ಶಿಕ್ಷಕರುಗಳ ಮೂಲಕ ದಾಂದಲೆ ನಡೆಸಿದ್ದಾರೆ. ಆಗ ಸ್ಥಳಕ್ಕೆ ಧಾವಿಸಿ ಸಭಾಪತಿಗಳ ಕುಮ್ಮಕ್ಕಿನ ಮೇರೆಗೆ ಮೋಹನ ಗುಡಸಲಮನಿ ಮತ್ತು ಅವರ ಸಂಗಡಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅವರ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಧಾರವಾಡ ಜಿಲ್ಲಾ ಸೆಷನ್ಸ್ ಕೋರ್ಟಿನಲ್ಲಿ ಎಫ್.ಐ.ಆರ್ ದಾಖಲಾಗಿದೆ ಎಂದರು.
ಸರ್ವೋದಯ ಶಿಕ್ಷಣ ಟ್ರಸ್ಟಿನ ವಿವಾದಕ್ಕೆ ಸಂಬಂಧಿಸಿದಂತೆ, ಸಭಾಪತಿ ಅವರ ಹಸ್ತಕ್ಷೇಪದಿಂದಾಗಿ ಈಗಾಗಲೇ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿ, ಅನೇಕ ವಂಚನೆ ಮತ್ತು ಅಹಿತಕರ ಬೆಳವಣಿಗೆಗಳು ನಡೆದಿವೆ. ಆರೋಪಿ ಸ್ಥಾನದಲ್ಲಿರುವ ಬಸವರಾಜ ಹೊರಟ್ಟಿಯವರು ವಿಧಾನಪರಿಷತ್ ಸಭಾಪತಿಯಾದಂತಹ ಪ್ರಭಾವಶಾಲಿ ಸ್ಥಾನದಲ್ಲಿರುವುದರಿಂದ ನ್ಯಾಯಯುತವಾದ ತನಿಖೆ ನಡೆಯುವುದು ಅಸಂಭವವಾಗಿದೆ. ಆದಕಾರಣ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಕಡೆಗಣಿಸಿರುವ ಅವಮಾನಕರ ಘಟನೆ ಖಂಡನೀಯ. ರಾಜ್ಯದ ಜನತೆ ಮತ್ತು ನ್ಯಾಯಾಂಗಗಳು ತಲೆತಗ್ಗಿಸುವಂತ ಘಟನೆ ಇದಾಗಿದೆ. ಎಲ್ಲರನ್ನು ಇದು ದಿಗ್ಭ್ರಮೆಗೊಳಿಸಿದೆ ಎಂದು ಹೇಳಿದರು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ್ ನ್ಯಾಯಾಲಯದ ಸಂಕೀರ್ಣದಲ್ಲಿ ದ್ವಜೋರೋಹಣ ನೆರವೇರಿಸಬೇಕಾದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ: ಅಂಬೇಡ್ಕರ್ ರವರ ಭಾವಚಿತ್ರವನ್ನು ತೆಗೆದಿರಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ಜಾತಿವಾದಿ ಮನಸ್ಥಿತಿಯುಳ್ಳ ವ್ಯಕ್ತಿಯು ಜಿಲ್ಲಾ ನ್ಯಾಯಾಧೀಶರ ಸ್ಥಾನದಲ್ಲಿರುವುದು ಸರಿಯಲ್ಲ. ನ್ಯಾಯಾಧೀಶರಂತಹ ಸಂವಿಧಾನಾತ್ಮಕ ಹುದ್ದೆಗೆ ಮಾತ್ರವಲ್ಲದೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಮತ್ತು ರಾಷ್ಟ್ರಕ್ಕೆ ಇವರು ಅಪಮಾನ ಮಾಡಿದ್ದಾರೆ. ಇದರಿಂದ ನ್ಯಾಯಾಧೀಶರಾಗಿರಲು ಅನರ್ಹರಾಗಿದ್ದಾರೆ. ಮಲ್ಲಿಕಾರ್ಜುನ ಗೌಡರ್ ಅವರನ್ನು ಸಹ ಕೂಡಲೇ ತಮ್ಮ ಸ್ಥಾನದಿಂದ ವಜಾಗೊಳಿಸಬೇಕೆಂದು ರಾಜ್ಯಪಾಲರನ್ನು ಅವರು ಒತ್ತಾಯಿಸಿದ್ದಾರೆ.