ಗಾಂಧೀಜಿ ‘ಪಾಕಿಸ್ತಾನದ ರಾಷ್ಟ್ರಪಿತ’ ಎಂದು ಬಿಜೆಪಿಯಿಂದ ಅಮಾನತಾಗಿದ್ದ ವ್ಯಕ್ತಿ ಈಗ ಪ್ರತಿಷ್ಠಿತ ಐಐಎಂಸಿ ಪ್ರೊಫೆಸರ್!

ಭೋಪಾಲ್ : ಗಾಂಧೀಜಿಯವರನ್ನು ‘ಪಾಕಿಸ್ತಾನದ ರಾಷ್ಟ್ರಪಿತ’ ಎಂದು ಫೇಸ್ ಬುಕ್ ಪೋಸ್ಟ್ ಹಾಕಿ ಮಧ್ಯಪ್ರದೇಶ ಬಿಜೆಪಿಯ ಮಾಧ್ಯಮ ವಿಭಾಗದ ಮುಖ್ಯಸ್ಥ ಸ್ಥಾನದಿಂದ ಅಮಾನತುಗೊಂಡಿದ್ದ ಅನಿಲ್ ಕುಮಾರ್ ಸೌಮಿತ್ರ ಈಗ, ದೇಶದ ಪ್ರತಿಷ್ಠಿಯ ಮಾಧ್ಯಮ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರೊಫೆಸರ್ ಆಗಿ ನೇಮಕಗೊಂಡಿದ್ದಾರೆ. ಭಾರತದ ಪ್ರತಿಷ್ಠಿತ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಸಮೂಹ ಸಂವಹನ ಸಂಸ್ಥೆ (ಐಐಎಂಸಿ)ಯಲ್ಲಿ ಸೌಮಿತ್ರ ಅವರು ಪ್ರೊಫೆಸರ್ ಆಗಿ ನೇಮಕಗೊಂಡಿದ್ದಾರೆ.

ಗಾಂಧೀಜಿ ಕುರಿತ ಅವಮಾನಕಾರಿ ಹೇಳಿಕೆಗಾಗಿ ಸೌಮಿತ್ರ ಅವರನ್ನು 2019ರಲ್ಲಿ ಬಿಜೆಪಿ ತನ್ನ ಪ್ರಾಥಮಿಕ ಸದಸ್ಯತನದಿಂದಲೇ ಅಮಾನತುಗೊಳಿಸಿತ್ತು. ಸೌಮಿತ್ರ ಅವರು ಸಾಮಾಜಿಕ ಜಾಲತಾಣದ ಪೋಸ್ಟ್ ಪಕ್ಷದ ಸಿದ್ಧಾಂತ ಮತ್ತು ನೈತಿಕತೆಗೆ ವಿರುದ್ಧವಾದುದು ಎಂದು ಆ ವೇಳೆ ಪಕ್ಷ ಸ್ಪಷ್ಟನೆ ನೀಡಿತ್ತು.

- Advertisement -

ಗಾಂಧೀಜಿ ಕುರಿತ ಫೇಸ್ ಬುಕ್ ಪೋಸ್ಟ್ ನಲ್ಲಿ, “ಅವರು ರಾಷ್ಟ್ರಪಿತ ಹೌದು, ಆದರೆ ಪಾಕಿಸ್ತಾನದ್ದು. ದೇಶದಲ್ಲಿ ಅವರಂತಹ ಕೋಟ್ಯಂತರ ಮಕ್ಕಳಿದ್ದಾರೆ, ಆದರೆ ಅವರಲ್ಲಿ ಕೆಲವೊಬ್ಬರು ಮಾತ್ರ ಯೋಗ್ಯರು, ಇನ್ನು ಕೆಲವರು ಅಯೋಗ್ಯರು’’ ಎಂದು ಸೌಮಿತ್ರ ಹೇಳಿದ್ದರು.

ಸೌಮಿತ್ರ ಎರಡನೇ ಬಾರಿಗೆ ಬಿಜೆಪಿಯಿಂದ ಈ ರೀತಿ ಅಮಾನತು ಆಗಿರುವುದು. 2013ರಲ್ಲಿ ಮಧ್ಯಪ್ರದೇಶ ಬಿಜೆಪಿಯ ಮುಖವಾಣಿ ‘ಚಾರೈವೆತಿ’ ಸಂಪಾದಕರಾಗಿದ್ದಾಗ, ಚರ್ಚ್ ಗಳ ಕುರಿತಂತೆ ಲೇಖನವೊಂದನ್ನು ಪ್ರಕಟಿಸಿ ಅಮಾನತು ಆಗಿದ್ದರು.

ಸೌಮಿತ್ರ ಐಐಎಂಸಿ ಪ್ರೊಫೆಸರ್ ಆಗಿರುವುದು ಖಚಿತವಾಗಿದೆ. 60ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳಿದ್ದರು, ಆದರೆ ಅ.26ರಂದು ನೇಮಕಾತಿ ಆದೇಶದೊಂದಿಗೆ ಸೌಮಿತ್ರ ಪ್ರೊಫೆಸರ್ ಆಗಿ ಸೇರ್ಪಡೆಗೊಂಡಿದ್ದಾರೆ.