ಬೆಂಗಳೂರು; ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆಯಾಗುತ್ತಿದ್ದು, ಸಾರ್ವಜನಿಕ ಆರೋಗ್ಯ ಸೇವೆಯ ಗುಣಮಟ್ಟದಲ್ಲಿ ವ್ಯಾಪಕ ಪ್ರಗತಿಯಾಗುತ್ತಿದೆ ಎಂದು ಕೇಂದ್ರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ [ಎನ್.ಎಚ್.ಎ]ದ ವಿಭಾಗೀಯ ಮುಖ್ಯಸ್ಥ ಡಾ. ಜಿತು ಲಾಲ್ ಮೀನಾ ಹೇಳಿದ್ದಾರೆ.
ಎಐಸಿಟಿಇ ನಿಂದ ಅನುಮೋದನೆಗೊಂಡಿರುವ ಆಸ್ಪತ್ರೆ ಮತ್ತು ಆರೋಗ್ಯ ನಿರ್ವಹಣೆ ಕುರಿತ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಗೆ ಭಾರತೀಯ ಆರೋಗ್ಯ ನಿರ್ವಹಣಾ ಸಂಸ್ಥೆಯ [ಐಐಎಚ್ಎಂಆರ್] ದಕ್ಷಿಣ ಭಾಗದ ಬೆಂಗಳೂರಿನ ಕ್ಯಾಂಪಸ್ ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಸೀಮಿತವಾಗಿದ್ದ ಎನ್.ಎ.ಬಿ.ಎಚ್ ಮಾನ್ಯತೆ ಇದೀಗ ಸಾರ್ವಜನಿಕ ಆಸ್ಪತ್ರೆಗಳಿಗೂ ದೊರೆಯುತ್ತಿದೆ. ಅದರಲ್ಲೂ ನಿರ್ದಿಷ್ಟವಾಗಿ ಗುಜರಾತ್ ನ ಪ್ರಾಥಮಿಕ ಆರೋಗ್ಯ ಕ್ಷೇಂದ್ರದಿಂದ ಹಿಡಿದು ಹಲವು ಆಸ್ಪತ್ರೆಗಳು ಈಗಾಗಲೇ ಇಂತಹ ಮಾನ್ಯತೆಯನ್ನು ಪಡೆದುಕೊಂಡಿವೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಇದೀಗ ಸಾರ್ವಜನಿಕ ಆಸ್ಪತ್ರೆಗಳು ಸೆಡ್ಡು ಹೊಡೆಯುತ್ತಿವೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಒಂದು ಸಣ್ಣ ತಪ್ಪು ಹಲವಾರು ಜೀವ ಹಾನಿಗಳಿಗೆ, ಕುಟುಂಬಗಳ ನಾಮಾವಶೇಷಕ್ಕೆ ಕಾರಣವಾಗುತ್ತವೆ. ಈ ಕ್ಷೇತ್ರದಲ್ಲಿ ಶೇ 100ರಷ್ಟು ಗುಣಮಟ್ಟ ಅತ್ಯಂತ ಅಗತ್ಯವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಲು ನಿರಂತರವಾಗಿ ಕಾರ್ಯನಿರ್ವಹಿಸಬೇಕಾಗುತ್ತಿದೆ. ಶಸ್ತ್ರಚಿಕಿತ್ಸಕರ ಕೈಯಲ್ಲಿ ಜೀವ ಇದ್ದರೆ ದಾದಿಯರು, ಶುಚಿತ್ವ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿದ್ದರೆ ಸೋಂಕು ಹರಡುವ ಅಪಾಯ ಎದುರಾಗುತ್ತದೆ ಎಂದು ಹೇಳಿದರು.
ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಉಷಾ ಮಂಜುನಾಥ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿರುವವರಿಗೆ ಈ ಕೋರ್ಸ್ ಅತ್ಯಂತ ಮಹತ್ವದ್ದಾಗಿದ್ದು, ರಕ್ಷಣಾ ವಲಯ, ಅದರಲ್ಲೂ ನಿರ್ದಿಷ್ಟವಾಗಿ ಸೇನೆಯಲ್ಲಿರುವವರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಕರ್ನಾಟಕ ನರ್ಸಿಂಗ್ ಅಸೋಸಿಯೇಷನ್ ಅಲ್ಲದೇ ಕರ್ನಾಟಕದ ಕೋವಿಡ್ ಕೋಶದಿಂದಲೂ ಈ ಕೋರ್ಸ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದರು.
ವಿಕ್ರಂ ಆಸ್ಪತ್ರೆಯ ಸಂಸ್ಥಾಪಕ ಡಾ. ವಿಕ್ರಂ, ಜೈಪುರದ ಐಐಎಚ್ಎಂಆರ್ ಸೊಸೈಟಿಯ ಟ್ರಸ್ಟಿ ಕಾರ್ಯದರ್ಶಿ ಡಾ. ಎಸ್.ಡಿ. ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.