ಉಡುಪಿ: ಶಾಸಕ ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯ ಮೂಲಕ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಉಡುಪಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ದೇಶದ ಜನರ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದು, ಅರೆಬೆರೆಯ ಮತ್ತು ಆಳವಾದ ಅಧ್ಯಯನ ಇಲ್ಲದೆ ಕೇವಲ ಓಟಿಗಾಗಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿ ಮಾತನಾಡಿದರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯಬಹುದೆಂಬ ಭ್ರಮೆಯಲ್ಲಿ ಇದ್ದಾರೆ. ಭಾರತದ ನಂಬಿಕೆಗಳ ಬುನಾದಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದಾದರೂ ದೇಶದಲ್ಲಿ ಆಂತರಿಕ ಕ್ಷೋಭೆಯನ್ನುನುಂಟು ಮಾಡುವುದು ದೇಶದ್ರೋಹದ ಕೆಲಸ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಕಾಂಗ್ರೆಸ್ ಪಕ್ಷ ಇದಕ್ಕೆ ಸಹಮತ ವ್ಯಕ್ತಪಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದರು.
ಸಣ್ಣ ಸಣ್ಣ ವಿಚಾರಗಳಿಗೆ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಗುತ್ತಾರೆ. ಈಗ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. ಅವರ ಮೌನ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಮ್ಮತಿ ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷ ಬಹುಸಂಖ್ಯಾತ ಹಿಂದೂಗಳಿಗೆ ಧಕ್ಕೆಯಾದರೂ ಕೂಡ ಮಾತನಾಡುವುದಿಲ್ಲ ಎಂದರೆ ಅರ್ಥವೇನು ಎಂದು ಪ್ರಶ್ನಿಸಿದರು.
ನೆಪ ಮಾತ್ರಕ್ಕಿರುವ ಅಸ್ತಿತ್ವವನ್ನು ಈ ದೇಶದಲ್ಲಿ ಕಾಂಗ್ರೆಸ್ ಕಳೆದುಕೊಳ್ಳಲಿದೆ. ಸತೀಶ್ ಜಾರಕಿಹೊಳಿ ಅವರು ಇಷ್ಟೆಲ್ಲಾ ಆದರೂ ಕೊಡ ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ. ಕೂಡಲೇ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು. ಮತ್ತು ಪಶ್ಚಾತ್ತಾಪ ಪಡಬೇಕು. ಇಲ್ಲದಿದ್ದರೆ ನೆಪ ಮಾತ್ರಕ್ಕಿರುವ ಅಸ್ತಿತ್ವವನ್ನು ಈ ದೇಶದಲ್ಲಿ ಕಾಂಗ್ರೆಸ್ ಕಳೆದುಕೊಳ್ಳಲಿದೆ. ಕಾಂಗ್ರೆಸ್ ನ್ನು ಸಮಗ್ರ ಜನತೆ ಮೂಲೆಯಲ್ಲಿ ಸ್ಥಾನ ತೋರಿಸುತ್ತಾರೆ. ಈ ಹೇಳಿಕೆ ಪೂರ್ವಾಗ್ರಹ ಪೀಡಿತ ಹೇಳಿಕೆ ಮಾತ್ರವಲ್ಲ ಯೋಜನಾಬದ್ದ ಹೇಳಿಕೆ ಎಂದರು.
ಹಲವಾರು ಜನ ಹಲವಾರು ಪಕ್ಷದವರು ಬೇರೆ ಬೇರೆ ಸಂದರ್ಭಗಳಲ್ಲಿ ಹಿಂದೂ ಭಾವನೆಗಳನ್ನು, ವಿಚಾರ, ಪರಂಪರೆ ಗಳಿಗೆ ಧಕ್ಕೆಯಾಗುವ ರೀತಿಯಲ್ಲಿ, ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ನೀಡುವ ಹೇಳಿಕೆಗಳನ್ನು ಗಮನಿಸಿದಾಗ ಪ್ರತಿಭಟನೆಯ ಜೊತೆಗೆ ಇದನ್ನು ನಿಲ್ಲಿಸುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಿಬಿಐ ಕಿರುಕುಳ ಬ್ಯೂರೋ ಆಫ್ ಇಂಡಿಯಾ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ತಪ್ಪು ಮಾಡದಿದ್ದರೆ ಭಯ ಯಾಕೆ ಪಡಬೇಕು. ಏನೇ ತನಿಖೆ ಬಂದರೂ ಸಿದ್ಧ ಎಂದು ಒಂದೆಡೆ ಹೇಳುತ್ತಾರೆ, ಇನ್ನೊಂದೆಡೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರು.
ಕಾಂಗ್ರೆಸ್ ಸಮಾವೇಶದಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೆಲುವಿನ ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಖರ್ಗೆ ಅವರು ಹಿಂದೂಗಳ ಬಗ್ಗೆ ಎಂದು ಮಾತನಾಡಿದ್ದಾರೆ. ಅವರೂ ಇದರ ಭಾಗ. ಯಾರು ಯಾರಿಗೆ ಗಿಫ್ಟ್ ಕೊಡುತ್ತಾರೆ ನೋಡೋಣ ಎಂದರು.