ಶಿರವಸ್ತ್ರ ವಿವಾದದ ಹಿಂದೆ ಎಸ್ ಡಿಪಿಐ-ಸಿಎಫ್ಐ ಇದ್ದರೆ ಗೃಹ ಸಚಿವರು, ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿತ್ತು: ಸಿದ್ದರಾಮಯ್ಯ ಪ್ರಶ್ನೆ

Prasthutha|

ಬೆಂಗಳೂರು: ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ  ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಅವರಿಗೆ ಇದರ ಹಿಂದೆ ಎಸ್ ಡಿಪಿಐ- ಸಿಎಫ್ ಐ ಇರಬಹುದೆಂಬ ಶಂಕೆ ಮೂಡಿದೆಯಂತೆ. ಇಲ್ಲಿಯ ವರೆಗೆ ಇವರ ಗೃಹ ಸಚಿವರು, ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಚಿವ ನಾಗೇಶ್ ಅವರ ಹೇಳಿಕೆಯನ್ನು ಪತ್ರಿಕೆಯೊಂದು ಪ್ರಕಟಿಸಿದ ಸುದ್ದಿಯನ್ನು ಉಲ್ಲೇಖಿಸಿ, ವಿವಾದದ ಹಿಂದೆ ಎಸ್ ಡಿಪಿಐ- ಸಿಎಫ್ ಐ ಇರಬಹುದೆಂಬ ಶಂಕೆ ಸಚಿವರಿಗೆ ಮೂಡಿದೆಯಂತೆ. ಇಲ್ಲಿಯ ವರೆಗೆ ಇವರ ಗೃಹ ಸಚಿವರು, ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

ಗೃಹಸಚಿವ ಆರಗ ಜ್ಞಾನೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ, ಸೇರಿದಂತೆ ಬಿಜೆಪಿ ನಾಯಕರು ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಕಾಂಗ್ರೆಸ್ ಇದೆ ಎನ್ನುತ್ತಿದ್ದಾರೆ.  ಶಿಕ್ಷಣ ಸಚಿವ ನಾಗೇಶ್ ಅವರಿಗೆ ಸಿಎಫ್ ಐ ಮೇಲೆ ಶಂಕೆಯಂತೆ. ಮೊದಲು ಎಲ್ಲರೂ ಕೂಡಿ ಒಂದು ತೀರ್ಮಾನಕ್ಕೆ ಬರುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

- Advertisement -

ಹಿಜಾಬ್ ಧಾರಣೆಯ ಸರಿ-ತಪ್ಪು ಬಗ್ಗೆ ನ್ಯಾಯಾಲಯ ನಿರ್ಧರಿಸಲಿ, ಅಲ್ಲಿಯ ವರೆಗೆ ಕಾಯೋಣ. ಆದರೆ ವಿದ್ಯಾರ್ಥಿನಿಗಳ ಮೇಲೆ ಹಲ್ಲೆಗೆ ಪ್ರಯತ್ನ, ಶಾಲೆಗೆ ಕಲ್ಲೆಸೆತ, ರಾಷ್ಟ್ರಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಅಪರಾಧ ಹೌದಾದರೆ ಮೊದಲು ಈ ಪುಂಡು ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಯಾರಿದ್ದಾರೆಂದು ಬಿಜೆಪಿ  ಸರ್ಕಾರ ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ. ವಿವಾದದ ಮುಂದೆ  ಯಾರಿದ್ದಾರೆ ಎನ್ನುವುದನ್ನು ರಾಜ್ಯ, ದೇಶ, ವಿದೇಶದ ಜನತೆ ಲೈವ್ ವಿಡಿಯೋಗಳಲ್ಲಿ ನೋಡುತ್ತಿದ್ದಾರೆ. ಅವರ ವಿರುದ್ದ ಕ್ರಮ ಯಾವಾಗ? ಎಂದು ಅವರು ಪ್ರಶ್ನಿಸಿದ್ದಾರೆ.

ನಿನ್ನೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ವಿವಾದದ ಹಿಂದೆ ಸಿಎಫ್ಐ ಇರುವ ಶಂಕೆ ಇದೆ ಎಂದು ಹೇಳಿದ್ದರು.

Join Whatsapp