ವಸತಿ ಯೋಜನೆಗೆ ಫಲಾನುಭವಿಗಳು ನಿರಾಸಕ್ತಿ ತೋರಿದರೆ ಬೇರೆ ಅರ್ಹರಿಗೆ ಹಂಚಿಕೆ ಮಾಡಿ: ಸಚಿವ ಜಮೀರ್‌ ಅಹಮದ್

Prasthutha|

ಬೆಂಗಳೂರು: ವಸತಿ ಯೋಜನೆಗಳನ್ನು ಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸಲು ತೀರ್ಮಾನಿಸಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ವಿಧಾನಸಭಾ ಕ್ಷೇತ್ರಾವಾರು ಶಾಸಕರ ಸಭೆ ಆರಂಭಿಸಿದ್ದಾರೆ.

- Advertisement -

ಮಂಗಳವಾರ ವಿಕಾಸಸೌಧದಲ್ಲಿ ಇಬ್ಬರು ಸಚಿವರು ಹಾಗೂ ಹದಿನೈದು ಶಾಸಕರ ಜತೆ ಸಭೆ ನಡೆಸಿದ ಸಚಿವರು, ವಸತಿ ಇಲಾಖೆ ವ್ಯಾಪ್ತಿಯ ಗೃಹ ಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರತಿ ಕ್ಷೇತ್ರವಾರು ಅನುಷ್ಠಾನದಲ್ಲಿರುವ ವಸತಿ ಯೋಜನೆಗಳ ಬಗ್ಗೆ ಶಾಸಕರ ಸಮ್ಮುಖದಲ್ಲೇ ಅಧಿಕಾರಿಗಳ ಜತೆ ಸಭೆ ನಡೆಸಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಅಡೆ ತಡೆ ನಿವಾರಿಸಿ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.

ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜತೆಗೂಡಿ ಅನುಷ್ಠಾನ ಮಾಡುತ್ತಿರುವ ಪ್ರಧಾನ ಮಂತ್ರಿ ಗ್ರಾಮೀಣ ಅವಾಸ್ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಾವಾರು ಹಂಚಿಕೆ ಆಗಿರುವ ಮನೆ ಹಾಗೂ ಬಾಕಿ ಉಳಿದಿರುವ ಮನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಆದಷ್ಟು ಬೇಗ ಗ್ರಾಮಸಭೆ ಮೂಲಕ ಫಲಾನುಭವಿಗಳ ಪಟ್ಟಿ ನೀಡುವಂತೆ ತಿಳಿಸಿದ್ದಾರೆ.

- Advertisement -

1.41 ಲಕ್ಷ ಮನೆ ಗುರಿ ಪೈಕಿ ಇನ್ನೂ 71 ಸಾವಿರ ಫಲಾನುಭವಿಗಳ ಪಟ್ಟಿ ಸಿದ್ದವಾಗಿಲ್ಲ. ಈ ತಿಂಗಳ ಅಂತ್ಯದೊಳಗೆ ಪಟ್ಟಿ ಕಳುಹಿಸಲು ಸಭೆಯಲ್ಲಿ ತಿಳಿಸಿದರು. ಹಂಚಿಕೆ ಆಗದ, ಫಲಾನುಭವಿಗಳ ನಿರಾಸಕ್ತಿ ಕಾರಣ, ಫಲಾನುಭವಿಗಳ ಮೊತ್ತ ಪಾವತಿಸದ, ಬ್ಲಾಕ್ ಮಾಡಲಾದ ಪ್ರಕರಣಗಳಲ್ಲಿ ಬೇರೆ ಅರ್ಹರ ಪಟ್ಟಿ ಸಿದ್ದ ಪಡಿಸಲು ಸಾಧ್ಯವೇ ಎಂಬ ಬಗ್ಗೆ ಸ್ಥಳೀಯ ಶಾಸಕರ ಜತೆ ಚರ್ಚಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಂದ ಪ್ರಸ್ತಾವನೆ ಸಿದ್ದಪಡಿಸಲು ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಶಾಸಕರು ಮನೆ ಕಟ್ಟಿಕೊಳ್ಳಲು ರಾಜ್ಯ ಸರ್ಕಾರದಿಂದ ನೀಡುವ ಸಬ್ಸಿಡಿ ಮೊತ್ತ ಹೆಚ್ಚಿಸುವಂತೆ ಮನವಿ ಮಾಡಿದರು. ಕಡಿಮೆ ಮನೆ ಕೊಟ್ಟರೂ ಮೊತ್ತ ಹೆಚ್ಚಿಸಿದರೆ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಈ ಕುರಿತು ಮುಖ್ಯಮಂತ್ರಿ ಅವರ ಜತೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.

ಈ ಮಧ್ಯೆ ಪ್ರಧಾನ ಮಂತ್ರಿ ಗ್ರಾಮೀಣ ಅವಾಸ್ ಯೋಜನೆ ಈ ತಿಂಗಳು ಅಂತ್ಯಕ್ಕೆ ಪೂರ್ಣ ಗೊಳ್ಳಲಿದ್ದು, ಚುನಾವಣೆ ಮತ್ತಿತರರ ಕಾರಣಕ್ಕೆ ಫಲಾನುಭವಿಗಳ ಆಯ್ಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇನ್ನೂ ಮೂರರಿಂದ ನಾಲ್ಕು ತಿಂಗಳು ಕಾಲಾವಕಾಶ ವಿಸ್ತರಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು . ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪುರಿ ಭೇಟಿ ಮಾಡಲು ನಿರ್ಧರಿಸಲಾಯಿತು.

ಪಶು ಸಂಗೋಪನ ಸಚಿವ ಕೆ. ವೆಂಕಟೇಶ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಜಿ ಸಚಿವ ಎಚ್. ಡಿ. ರೇವಣ್ಣ, ಅಪ್ಪಾಜಿ ನಾಡಗೌಡ, ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಡಾ. ಅಜಯ್ ಸಿಂಗ್, ಸುರೇಶ್ ಬಾಬು, ಹಂಪಾನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್, ರಮೇಶ್ ಬಂಡಿ ಸಿದ್ದೇಗೌಡ, ಗುಬ್ಬಿ ಶ್ರೀನಿವಾಸ್, ಕೋನರೆಡ್ಡಿ, ಸುಬ್ಬಾರೆಡ್ಡಿ, ಲತಾ ಮಲ್ಲಿಕಾರ್ಜುನ, ಡಾ. ಶ್ರೀನಿವಾಸ್, ಕೃಷ್ಣಾ ನಾಯಕ್, ನೇಮಿರಾಜ್ ನಾಯಕ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಹಿಂದೆ ರಾಮನಗರ, ಚನ್ನಪಟ್ಟಣ, ಕುಣಿಗಲ್, ಮಾಗಡಿ, ನೆಲಮಂಗಲ, ಶಾಂತಿನಗರ ಆನೇಕಲ್ ಕ್ಷೇತ್ರಗಳ ಶಾಸಕರ ಜತೆ ನಡೆದ ಸಭೆಯಲ್ಲಿ ಕೈಗೊಂಡ ಕ್ರಮ ಯಾವ ಹಂತಕ್ಕೆ ಬಂದಿದೆ ಎಂಬ ಬಗ್ಗೆಯೂ ಸಚಿವರು ಮಾಹಿತಿ ಪಡೆದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ, ಪ್ರಧಾನ ಅಭಿಯಂತರ ಸಣ್ಣ ಚಿತ್ತಯ್ಯ, ಗೃಹ ಮಂಡಳಿ ಪ್ರಧಾನ ಅಭಿಯಂತರ ಶರಣಪ್ಪ ಸುಲಗಂಟಿ ಉಪಸ್ಥಿತರಿದ್ದರು.

Join Whatsapp