ಮಂಪರು ಪರೀಕ್ಷೆ ನಡೆಸಿದರೆ ಡ್ರೈವರ್ ಕುಮಾರ್, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಸತ್ಯ ಹೊರಬರಲಿದೆ: ಬಿ.ಕೆ.ಹರಿಪ್ರಸಾದ್

Prasthutha|

ಬೆಂಗಳೂರು: ಸ್ವಯಂ ಘೋಷಿತ ಶಿಸ್ತಿನ ಪಕ್ಷದ ಬೀದಿ ರಂಪಾಟ ರಾಜ್ಯದ ಜನರಿಗೆ ಮನರಂಜನೆಯ “ಸಂತೋಷ”ಕೂಟ ಏರ್ಪಡಿಸಿದೆ. ಸ್ವ ಪಕ್ಷದ ನಾಯಕರಿಗೆ ಬಿರುದು ಬಾವಲಿಗಳ ಸುರಿಮಳೆ ಆಗುತ್ತಿದೆ. ಇದೊಂದು ಟ್ರೇಲರ್ ಅಷ್ಟೇ, ಬತ್ತಳಿಕೆಯ ಬಾಣಗಳು ಮತ್ತಷ್ಟು”ಸಂತೋಷ” ಪಡಿಸುತ್ತದೆ ಕಾದು ನೋಡಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಸ್ ಅಲ್ಲಿ ಪ್ರಾಣಿಗಳನ್ನು ತರಬೇತಿ ನೀಡಿ ಮೂಗುದಾರ ಹಾಕಿ ಮನರಂಜನೆ ಮಾಡಬಹುದು, ಅಪ್ಪಿತಪ್ಪಿ ಬಿಟ್ರೆ ಎಲ್ಲರನ್ನೂ ತಿಂದು ಹಾಕುತ್ತದೆ. ಬಿಜೆಪಿಯಲ್ಲಿ ಈಗಾಗುತ್ತಿರುವುದು ಅದೇ. ಕೊಲೆಗಡುಕತನ, ಪಿಂಪ್ ದಂಧೆ, ಹಫ್ತಾ ವಸೂಲಿ ತನ್ನವರನ್ನೂ ಬಿಡದೆ ತಿನ್ನುತ್ತಿದೆ. ಮೂಗುದಾರ ತಪ್ಪಿಯಾಗಿದೆ, ಹತೋಟಿಯಲ್ಲಿಡಲು ಸಾಧ್ಯವೇ ಇಲ್ಲ ಎಂದು ಕುಟುಕಿದ್ದಾರೆ.

ಬಿಜೆಪಿಯಲ್ಲಿ ಮೇಲೆಲ್ಲಾ ತಳಕು-ಬಳಕು, ಒಳಗೆಲ್ಲ ಬರೀ ಹುಳುಕು-ಕೊಳಕು ನಾರುತ್ತಿದೆ. ಕಾಂಗ್ರೆಸ್ ತಟ್ಟೆಯಲ್ಲಿ ನೊಣ ಹುಡಕದೇ, ನಿಮ್ಮಲ್ಲಿ ಹೆಗ್ಗಣ ಬಿದ್ದು ವಿಲ ವಿಲ ಒದ್ದಾಡುತ್ತಿದೆ ಒಮ್ಮೆ ಕಣ್ಣಾಡಿಸಿ. ಸರ್ಕಾರ ಮ್ಯಾನೇಜ್ ಮಾಡುವ ಸಿಎಂ, ಪಕ್ಷದ ಮೇಲೆ ಹಿಡಿತವಿಲ್ಲದ ಕಾಮಿಡಿಯನ್ ಅಧ್ಯಕ್ಷರಾಗಿರುವಾಗ ಹಾದಿ ಬೀದಿಯಲ್ಲಿ ಹೊಡೆದಾಡುವಂತಾಗಿದೆ ಎಂದು ಹೇಳಿದ್ದಾರೆ.

- Advertisement -

ಸಿಎಂ ಆಗಲು ಎರಡೂವರೆ ಸಾವಿರ ಕೋಟಿ ಹಣದ ಬೇಡಿಕೆ, ಮಂತ್ರಿಯಾಗಲು ಪಿಂಪ್ ಕೆಲಸ, ಸಿಡಿ ಬಿಡುಗಡೆಯ ಬೆದರಿಕೆ. ಮಾಜಿ ಸಿಎಂ ಮಗನ ದೃಷ್ಟವತಾರಗಳು. ಈ ಆರೋಪಗಳು ಕೇಂದ್ರದ ಮಾಜಿ ಮಂತ್ರಿ ಯತ್ನಾಳ್ ಸ್ವಪಕ್ಷದವರ ಮೇಲೆ ಎಗರಿ ಬಿದ್ದ ಪರಿ. ಅಕ್ರಮ ಹಣ ದಂಧೆಗಳ ಬಗ್ಗೆ ಸಿಬಿಐ, ಇಡಿ,ಐಟಿ, ಎಲ್ಲವೂ ದೆಹಲಿಯ ಚಳಿಯಲ್ಲಿ ಬೆಚ್ಚಗೆ ಕಾವು ಪಡೆಯುತ್ತಿರಬೇಕು ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ಬಿಜೆಪಿಯಲ್ಲಿ ಡ್ರೈವರ್ ಗಳನ್ನು ಕೊಲೆ ಮಾಡುವುದು ರೂಢಿಯಾಗುತ್ತಿದೆ. ಸಚಿವ ನಿರಾಣಿಯವರ ಮಾತಿನ ಮರ್ಮವೇನು? ಯತ್ನಾಳ್ ಅವರ ಡ್ರೈವರ್ ಕುಮಾರ್ ಕೊಲೆಯಾದದ್ದು ಹೇಗೆ? ಯಾವಾಗಾ? ಮುಚ್ಚಿಟ್ಟಿದ್ಯಾರು? ಇದು ಮಂಗಳೂರಿನ ಪ್ರವೀಣ್ ನೆಟ್ಟಾರು ಕೊಲೆ ಮಾದರಿಯಂತಿದೆ. ಮಂಪರು ಪರೀಕ್ಷೆ ನಡೆದರೆ ಮಾತ್ರ ಸತ್ಯ ಬಹಿರಂಗವಾಗಲು ಸಾಧ್ಯ ಎಂದು ಹೇಳಿದ್ದಾರೆ.

ಶಾಸಕ ಯೋಗೇಶ್ವರ್ ಆಡಿಯೋದಲ್ಲಿ ವಿಶೇಷವೇನಿಲ್ಲ. ಕೊಲೆ ಪ್ರಕರಣದಲ್ಲಿ ನ್ಯಾಯಾಲಯವೇ ಛೀಮಾರಿ ಹಾಕಿ ಗಡಿಪಾರಾದ ಕೇಂದ್ರ ಗೃಹ ಸಚಿವರು ರೌಡಿಯಲ್ಲದೆ ಮತ್ತೇನು? ಅಧಿಕಾರಕ್ಕೇರಲು ಸಾದ್ಯವಿಲ್ಲ ಎಂದು ಬಿಜೆಪಿ ಶಾಸಕರಿಗೆ ಮನದಟ್ಟಾಗಿದೆ. ಹೀಗಾಗಿ ಆಪರೇಷನ್ ಕಮಲಾಸೂರರು ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಜನ ಅವಕಾಶ ನೀಡುವುದಿಲ್ಲ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ಬಿಜೆಪಿಗೆ ಬಿಜೆಪಿಯೇ ಶತ್ರುವಾಗಿದೆ. ಜನಾದೇಶ ಈಗಾಗಲೇ ಸ್ಪಷ್ಟವಾಗಿದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವಂತೆ ಬಿಜೆಪಿ ನಾಯಕರು ಟ್ರೇಲರ್’ಗಳು ಬಿಡುಗಡೆ ಮಾಡುತ್ತಿದ್ದಾರೆ. ಕಾವು ಹೆಚ್ಚಾದಂತೆ ಸಿನಿಮಾ, ಸಿಡಿಗಳು ಬಿಡುಗಡೆ ಆಗಬಹುದು. ಪಿಚ್ಚರ್ ಅಭಿ ಬಾಕಿ ಹೈ..! ಎಂದು ಟ್ವೀಟ್ ಮೂಲಕ ಕುಹಕವಾಡಿದ್ದಾರೆ.

Join Whatsapp