ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟರಲ್ಲ ಎಂದರೆ ಯಾಕೆ ಯಡಿಯೂರಪ್ಪ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ಮೋದಿ ಅವರಿಗೆ ದಮ್ಮು, ತಾಕತ್ತು ಇದ್ದರೆ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕ್ರಮ ಜರುಗಿಸಲಿ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಗ್ರಹಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ 354 ಕೋಟಿಗೂ ಹೆಚ್ಚು ಹಣ ಸಿಕ್ಕಿದ್ದು, ಭ್ರಷ್ಟಾಚಾರ ಯಾರೆ ಮಾಡಿದರೂ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ತಪ್ಪು ಯಾರೇ ಮಾಡಿದರೂ ತಪ್ಪೇ” ಎಂದರು.“2021ರ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ. 566 ಕೋಟಿ ವೆಚ್ಚದಲ್ಲಿ ಬಿಡಿಎ ಮನೆಗಳ ನಿರ್ಮಾಣಕ್ಕೆ ಕ್ಲಿಯರೆನ್ಸ್ ಕೊಡುವುದಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಆರ್‌ಟಿಜಿಎಸ್ ಮೂಲಕ ಯಡಿಯೂರಪ್ಪ ಅವರ ಕುಟುಂಬದವರ ಖಾತೆಗಳಿಗೆ ರಾಮಲಿಂಗಂ ಎಂಬ ಕಂಪನಿ ಹೆಸರಿನಲ್ಲಿ ಹಣ ವರ್ಗಾವಣೆ ಆಗಿತ್ತು. ಆ ಹಣವನ್ನ ಕೋಲ್ಕತ್ತಾ ಮೂಲದ 7 ಶೆಲ್ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಆ ಶೆಲ್ ಕಂಪನಿಗಳು ಕಾರ್ಪೊರೇಷನ್ ಬ್ಯಾಂಕ್ ಮೂಲಕ ಯಡಿಯೂರಪ್ಪನವರ ಕುಟುಂಬಕ್ಕೆ ಸೇರಿದ 2 ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ್ದವು. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಎ1, ಅವರ ಪುತ್ರ ಎ2, ಅಳಿಯ ಶಶಿದರ್ ಮರಡಿ ಎ3, ಮೊಮ್ಮಗ ಸಂಜಯ್ ಶ್ರೀ ಎ4, ದುಡ್ಡು ಕೊಟ್ಟ ಚಂದ್ರಕಾಂತ ರಾಮಲಿಂಗಂ ಎ5 ಹೀಗೆ ಮುಂತಾದವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮೋದಿ ಮೌನ ಮುರಿಯಲಿ” ಎಂದು ಒತ್ತಾಯಿಸಿದರು.
“ದೇಶದ ಎಲ್ಲಾ ಭ್ರಷ್ಟರ ವಿರುದ್ಧ ತನಿಖೆ ಆಗಬೇಕು. ಕರ್ನಾಟಕ, ತೆಲಂಗಾಣ, ಒಡಿಸ್ಸಾ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖಂಡರನ್ನ ಮಾತ್ರ ಗುರಿ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಲ್ಲಿ ಯಾರು ಭ್ರಷ್ಟರೇ ಇಲ್ಲವೇ” ಎಂದು ಪ್ರಶ್ನಿಸಿದರು.
“ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಮಾಡಿಸಲು ಯಾವ ಪ್ರಯತ್ನವನ್ನು ಮಾಡುತ್ತಲೇ ಇಲ್ಲ. ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ರೈತರ ಹಿತ ಕಾಯಲು ಪ್ರಧಾನ ಮಂತ್ರಿ ಅವರಿಗೆ ಒತ್ತಡ ತರಬಹುದಿತ್ತ, ಆದರೆ ಅಧಿಕಾರಕ್ಕಾಗಿ ಕಚ್ಚಾಟ ಮಾಡುತ್ತ ಕಾಲ ಕಳೆಯುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿ ಬಿ ಟೀಮ್ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಎ ಟೀಮ್ ಗಿಂತ ಬಿ ಟೀಮ್ ಸ್ಟ್ರಾಂಗ್ ಎಂದು ತೋರಿಸಲು ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಲೋಕಸಭೆ ಚುನಾವಣೆ ನಂತರ 50 ಜನ ಶಾಸಕರು ಪಕ್ಷಾಂತರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ಸಿನ ಎಲ್ಲಾ ಶಾಸಕರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಮುಳುಗುತ್ತಿರುವ ಹಡಗು ಬಿಜೆಪಿಗೆ ಯಾರು ಹೋಗುವುದಿಲ್ಲ” ಎಂದರು.