ಗಾಂಧಿನಗರ: ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಗೊಂಡಾಲ ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಮತ್ತು ಅವರ ಪತಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇಸ್ಲಾಮ್ ಸ್ವೀಕರಿಸುವುದಾಗಿ ಹೇಳಿದ್ದ ದಲಿತ ಕಾಂಗ್ರೆಸ್ ನಾಯಕ ರಾಜು ಸೋಲಂಕಿ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಶಾಸಕಿ ಮತ್ತು ಅವರ ಪತಿ ಜಯರಾಜ ಸಿಂಹ ವಿರುದ್ಧ ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದ ರಾಜು ಸೋಲಂಕಿ,ಇಲ್ಲದಿದ್ದರೆ ಇಸ್ಲಾಮ್ ಸ್ವೀಕರಿಸುವುದಾಗಿ ಜುಲೈ11ರಂದು ಹೇಳಿಕೊಂಡಿದ್ದರು. ಶಾಸಕಿಯ ಪುತ್ರ ಜ್ಯೋತಿರಾದಿತ್ಯ ಸಿಂಹ ಅಲಿಯಾಸ್ ಗಣೇಶ ಸೇರಿದಂತೆ 11 ಜನರ ಗುಂಪು ತನ್ನ ಪುತ್ರ ಸಂಜಯ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಪಹರಿಸಿದ್ದರು ಮತ್ತು ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿದ್ದರು.
ರಾಜು ಮತ್ತು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿರುವ ಬಿಜೆಪಿ ಶಾಸಕಿಯ ಪ್ರಭಾವ ಎನ್ನುವುದನ್ನು ಎಸ್‌ಪಿ ಹರ್ಷದ್ ಮೆಹ್ತಾ ನಿರಾಕರಿಸಿದ್ದಾರೆ. ಆರೋಪಿಗಳು ಕ್ರಿಮಿನಲ್ ಚಟುವಟಿಕೆಗಳ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಇತ್ತೀಚಿನ ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾದಗಳ ನಿಯಂತ್ರಣ ಕಾಯ್ದೆಯಡಿ ಆರೋಪಗಳು ಇದನ್ನು ಆಧರಿಸಿವೆ ಎಂದು ಹೇಳಿದ್ದಾರೆ.