ಇಸ್ಲಾಮಾಬಾದ್: ಭಾರತವನ್ನು ತೆಗಳುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದಿಢೀರನೆ ಭಾರತವನ್ನು ಹೊಗಳುತ್ತಿರುವುದನ್ನು ವಿರೋಧಿಸಿ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರ್ಯಮ್ ನವಾಜ್ ಷರೀಫ್ ವಾಗ್ದಾಳಿ ನಡೆಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
“ತನ್ನ ಅಧಿಕಾರ ಕೈತಪ್ಪಿ ಹೋಗುತ್ತಿದೆ ಎಂದು ಹುಚ್ಚೆದ್ದು ಕುಣಿಯುತ್ತಿರುವ ಈ ವ್ಯಕ್ತಿಯನ್ನು ಅವರದ್ದೇ ಸ್ವಂತ ಪಕ್ಷ ಅವರನ್ನು ಉಚ್ಛಾಟಿಸಿರುವುದಾಗಿ ಯಾರಾದರೂ ತಿಳಿಸಲಿ. ಭಾರತ ತುಂಬಾ ಇಷ್ಟವಾದರೆ ಇಮ್ರಾನ್ ಖಾನ್ ಪಾಕಿಸ್ತಾನ ತೊರೆದು ಭಾರತಕ್ಕೆ ಹೋಗಿ ನೆಲೆಸಲಿ” ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ (ಪಿಎಂಎಲ್ ಎನ್) ಪಕ್ಷದ ಉಪಾಧ್ಯಕ್ಷೆ ಮರ್ಯಮ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿಗಳು ಹೇಳಿವೆ.
ಅಧಿಕಾರಕ್ಕಾಗಿ ಈ ಪರಿಯಲ್ಲಿ ಅಂಗಲಾಚುತ್ತಿರುವವರನ್ನು ನಾನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಮರ್ಯಮ್ ಪಾಕ್ ಸಂಸತ್ ನಲ್ಲಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮುನ್ನ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.