ಬೆಂಗಳೂರು: ಶಾಸಕರ ಲೆಟರ್ ತೆಗೆದುಕೊಂಡು ಮುಖ್ಯಮಂತ್ರಿಗಳ ಕಚೇರಿಗೆ ಹೋದರೆ 30 ಲಕ್ಷ ಕೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಇಂದು (ಜು.02) 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕಚೇರಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಸಿಎಂ ಕಚೇರಿ ಎಲ್ಲಿಗೆ ಬಂದಿದೆ ಅಂತ ಜನ ಮಾತಾಡ್ತಿದ್ದಾರೆ. ಶಾಸಕರ ಲೆಟರ್ ತೆಗೆದುಕೊಂಡು ಸಿಎಂ ಕಚೇರಿಗೆ ಹೋದ್ರೆ 30 ಲಕ್ಷ ಕೊಡಬೇಕು ಅಂತಾರೆ. 30 ಲಕ್ಷ ಕೊಡದೇ ಹೋದರೆ ಕೆಲಸ ಆಗಲ್ಲ ಅಂತ ಸಿಎಂ ಕಚೇರಿಯಲ್ಲಿ ಹೇಳ್ತಾರೆ ಎಂದು ಆರೋಪಿಸಿದರು. ನಾನು ಯಾಕೆ ತಾಳ್ಮೆ ಕಳೆದುಕೊಳ್ಳಲಿ. ನಾನು ಎರಡು ಬಾರಿ ಆಕ್ಸಿಡೆಂಟ್ ಆಗಿ ಸಿಎಂ ಆದೆ. ಜನರಿಂದ ನಾನು ಸಿಎಂ ಆಗಿಲ್ಲ. ಕಾಂಗ್ರೆಸ್ ಅವರು ಎರಡು ವರ್ಷ ಬೀದಿ ಬೀದಿಯಲ್ಲಿ ಜಾಗಟೆ ಬಾರಿಸಿದ್ರಿ. 40% ಅಂದ್ರಿ ಅದಕ್ಕೆ ಡಾಕ್ಯುಮೆಂಟ್ ಇಟ್ಡಿದ್ದೀರಾ. ಪೇ ಸಿಎಂ ಅಂತ ಮಾಡಿದ್ರಿ ಅದಕ್ಕೆ ದಾಖಲೆ ಇಟ್ರಾ?, ಆಗ ನಿಮಗೆ ತಾಳ್ಮೆ ಇರಲಿಲ್ಲವಾ ಎಂದು ಪ್ರಶ್ನಿಸಿದರು.