ಶಿವಮೊಗ್ಗ: ಬಿಜೆಪಿ ವರಿಷ್ಠರ ಜತೆ ನನ್ನ ಮಾತುಕತೆ ಮುಗಿದ ಅಧ್ಯಾಯವಾಗಿದ್ದು, ಇನ್ನು ಮಾತುಕತೆ ಇಲ್ಲ. ಆದರೆ ಪಕ್ಷದಿಂದ ಏಕೆ ನನ್ನನ್ನು ಉಚ್ಚಾಟಿಸಿಲ್ಲ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಉಚ್ಚಾಟಿಸಿದರೆ ಅಪ್ಪ ಮಕ್ಕಳ ವಿರುದ್ಧ ಇನ್ನಷ್ಟು ಕಟುವಾಗಿ ಮಾತನಾಡಲು ಸಾಧ್ಯವಾಗುತ್ತಿತ್ತು ಎಂದು ಬಿಜೆಪಿ ಬಂಡಾಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದೊಳಗಿರುವ ಇನ್ನೂ ಅನೇಕ ನಾಯಕರಿಗೆ ತೀವ್ರ ಅಸಮಾಧಾನ ಇದೆ. ಕಾಲ ಕಾಲಕ್ಕೆ ಅದನ್ನು ಹೊರ ಹಾಕಿದ್ದಾರೆ ಎಂದಿದ್ದಾರೆ.
ಬಿಜೆಪಿ ಶುದ್ಧೀಕರಣವಾಗಬೇಕೆಂದು ಬಯಸಿ ಹೊರಬಂದು ನಾನು ಹೋರಾಡುತ್ತಿದ್ದರೆ, ಸಿ.ಟಿ.ರವಿ ಒಳಗಿದ್ದು ಹೋರಾಡುತ್ತಿದ್ದಾರೆ. ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ನಾನು ಹೇಳಿಲ್ಲ, ಅವಕಾಶ ಕೊಟ್ಟಿಲ್ಲ ಎಂದು ಹೇಳಿದ್ದೇನೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಸದಾನಂದಗೌಡ, ಕಟೀಲ್ಗೆ ಅವಕಾಶ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದೇನೆ ಎಂದರು.