ಮಂಗಳೂರು: ಜಿಲ್ಲೆಯಲ್ಲಿ ನಡೆದ ಅನೇಕ ಮತೀಯ ಹತ್ಯೆ ಪ್ರಕರಣಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಎಫ್ ಐಆರ್ ನಲ್ಲಿದ್ದರೆ ನಾನು ರಾಜಕೀಯ ತೊರೆಯುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತೀಯವಾದದ ಹೆಸರಿನಲ್ಲಿ ಮುಸ್ಲಿಮ್, ಹಿಂದೂಗಳ ಹತ್ಯೆಯಾಗಿವೆ. ಹತ್ಯೆಗಳಲ್ಲಿ ಬಿಜೆಪಿ ಮತ್ತು ಎಸ್ ಡಿಪಿಐನವರ ಹೆಸರು ಇದೆ. ಬಾಳಿಗಾ ಪ್ರಕರಣ, ಹರೀಶ್ ಪೂಜಾರಿ ಪ್ರಕರಣ ಸೇರಿ ಯಾವುದೇ ಹತ್ಯೆ ಪ್ರಕರಣಗಳನ್ನು ನೋಡಿ. ಕಾಂಗ್ರೆಸ್ ಕಾರ್ಯಕರ್ತರ ಹೆಸರು ಇಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ಜನರ ರಕ್ಷಣೆಯ ಜವಾಬ್ದಾರಿ ಇರುವುದು ಗೃಹ ಸಚಿವರಿಗೆ. ಗೃಹ ಮಂತ್ರಿಗಳಾದ ಅರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯನ್ನು ನಾಯಿಗೆ ಹೋಲಿಸಿದ್ದಾರೆ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದೇ ಅರ್ಥ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಒಂದು ಇಲಾಖೆಯ ಮಂತ್ರಿ ತನ್ನ ಇಡೀ ಇಲಾಖೆಯನ್ನು ಇಷ್ಟು ಹೀನಾಯವಾಗಿ ಮಾತನಾಡುತ್ತಾರೆ ಎಂದರೆ ಅವರು ಸಚಿವರಾಗಿರಲು ಅಸಮರ್ಥರು. ಅಲ್ಲದೇ ಬಿಜೆಪಿ ಸರಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ ಎಂಬುದನ್ನು ಇದು ಪುಷ್ಟೀಕರಿಸುತ್ತದೆ ಎಂದು ರೈ ಹೇಳಿದರು.
ಬಿಜೆಪಿಯವರು ಆಳಲು ಬಾರದಿದ್ದಾಗ ಅಧಿಕಾರಿಗಳನ್ನು ದೂರುತ್ತಾರೆ. ಪೊಲೀಸ್ ಇಲಾಖೆ ಸಹಿತ ಎಲ್ಲ ಇಲಾಖೆಗಳಲ್ಲೂ ಒಳ್ಳೆಯ ಅಧಿಕಾರಿಗಳೂ ಇದ್ದಾರೆ. ಗುತ್ತಿಗೆದಾರರ ಸಂಘವೇ ಇವರು ಶೇ. 40% ಲಂಚ ಹೊಡೆಯುತ್ತಾರೆ ಎಂದಿದ್ದಾರೆ. ಇವರಿಗೆ ಆಳುವ ಯೋಗ್ಯತೆಯೇ ಇಲ್ಲ ಎಂದು ರೈ ತಿಳಿಸಿದರು.
ಪಂಚಾಯತ್ ರಾಜ್ ಬೀಳಿಸಿದವರು, ದುರ್ಬಲ ಗೊಳಿಸಿದವರು ಬಿಜೆಪಿಯವರು. ಇವರ ಆಡಳಿತದಲ್ಲಿ ಒಬ್ಬ ಬಡವರಿಗೆ ಒಂದು ಮನೆ ನೀಡಿದ್ದು ತೋರಿಸಿ. ಬಿಜೆಪಿ ಕಾಲದಲ್ಲಿ ಕಾಂಗ್ರೆಸ್ ಕಾಲದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಆಹಾರ ಯೋಜನೆ ಮಾತ್ರ ಸರಿಯಾಗಿದೆ. ಪಂಚಾಯತ್ ರಾಜ್ ಗಟ್ಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಪಂಚಾಯತ್ ಜನರದು ಎಂದು ರಮಾನಾಥ ರೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕುಮಾರ್ ಶಾಲೆಟ್ ಪಿಂಟೋ, ಚಿತ್ತರಂಜನ್, ಹರಿನಾಥ್, ಪದ್ಮನಾಭ ನರಿಂಗಾಣ ಮೊದಲಾದವರು ಉಪಸ್ಥಿತರಿದ್ದರು.