ಬೊಮ್ಮಾಯಿ ಅಲ್ಪಸಂಖ್ಯಾತರ ಕಂಪನಿಗಳ ಜತೆ ಬಂಡವಾಳ ಹೂಡಿಕೆ ಮಾಡುತ್ತಿದ್ದರೆ, ಇಲ್ಲಿ ಸಂಘಟನೆಗಳು ಗೊಂದಲ ಸೃಷ್ಟಿಸುತ್ತಿವೆ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಾವೋಸ್ ಪ್ರವಾಸದಲ್ಲಿದ್ದು, ಅಲ್ಲಿ ಹಲವು ಅಲ್ಪಸಂಖ್ಯಾತರ ಕಂಪನಿಗಳ ಜತೆ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಾರೆ. ಆದರೆ ಇಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳು ಗೊಂದಲ ಸೃಷ್ಟಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಬೆಳವಣಿಗೆ ರಾಜ್ಯಕ್ಕೆ ದೊಡ್ಡ ಹೊಡೆತ ನೀಡಲಿದ್ದು, ಈಗಾಗಲೇ ಕಿರಣ್ ಮಜುಮ್ದಾರ್, ಮೋಹನ್ ದಾಸ್ ಪೈ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಕೂಡ ರಾಜ್ಯದ ಘನತೆ ರಕ್ಷಿಸುವ ವಿಚಾರವಾಗಿ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

- Advertisement -

ವಿಧಾನ ಸೌಧದಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿ ಸರ್ಕಾರ ಕರ್ನಾಟಕದ ಘನತೆಯನ್ನು ಯಾಕೆ ಹಾಳು ಮಾಡುತ್ತಿದೆಯೋ ಗೊತ್ತಿಲ್ಲ. ನಮ್ಮ ರಾಜ್ಯ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ,ಇಲ್ಲಿ ಎಲ್ಲರೂ ಯಾವುದೇ ಗೊಂದಲಗಳಿಲ್ಲದೇ ಬದುಕುತ್ತಿದ್ದು, ಬಿಜೆಪಿ ಸರ್ಕಾರ ಚುನಾವಣೆ ಹಿನ್ನೆಲೆಯಲ್ಲಿ ಕರಾವಳಿ ಭಾಗ ಸೇರಿದಂತೆ ಇತರ ಕಡೆಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನ ಘನತೆಯ ಬಗ್ಗೆ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಗುಣಗಾನ ಮಾಡಿದ್ದರು. ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಪ್ರತಿಷ್ಠಿತ ಸಂಸ್ಥೆಗಳಿದ್ದು, ಅಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಆದರೆ ಈ ಬೆಳವಣಿಗೆಗಳು ಇದಕ್ಕೆ ತೊಡಕಾಗಲಿವೆ. ಹೀಗಾಗಿ ಕರಾವಳಿ ಭಾಗದ ಜನ ಮುಂಬೈ, ಸೌದಿ ರಾಷ್ಟ್ರಗಳಿಗೆ ಹೋಗುತ್ತಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ, ಕೋಮು ಸೌಹಾರ್ದತೆ ಕಾಪಾಡಬೇಕು ಎಂದು ಆಗ್ರಹಿಸುತ್ತೇನೆ. ಇಡೀ ಸರ್ಕಾರ ಸ್ವಾರ್ಥ ರಾಜಕಾರಣದ ಬಗ್ಗೆ ಗಮನಹರಿಸುತ್ತಿದೆ. ರಾಜ್ಯದ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

- Advertisement -

ಕೋವಿಡ್ ನಿಯಮಾವಳಿ ಉಲ್ಲಂಘನೆ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಯಿಸಿದ ಅವರು, ಬಿಜೆಪಿ ಸರ್ಕಾರ ಸಂವಿಧಾನ ಬಾಹಿರವಾಗಿ ಕೇವಲ ಕಾಂಗ್ರೆಸ್ ಪಕ್ಷದವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದೆ. ಬಿಜೆಪಿ ನಾಯಕರು ಹಾಗೂ ಸಚಿವರು ಹಲವು ಬಾರಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ ದ್ವೇಷ ಸಾಧಿಸುತ್ತಿದೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪರಿಷತ್ ಚುನಾವಣೆ ಟಿಕೆಟ್ ಹಂಚಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಧಾನ ಪರಿಷತ್ ಸ್ಥಾನಕ್ಕೆ ನಮ್ಮ ಪಕ್ಷದಲ್ಲಿ ಬಹಳಷ್ಟು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರಿಗೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸಿ ಕೊಡಲಾಗುವುದು. ಎಸ್.ಆರ್. ಪಾಟೀಲ್ ಅವರು ಪಕ್ಷದ ಹಿರಿಯ ನಾಯಕರಿದ್ದು, ಹೈಕಮಾಂಡ್ ಅವರ ವಿಚಾರವನ್ನು ಗಮನಿಸಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈ ಬಾರಿ ಕೇವಲ 2 ಸ್ಥಾನಗಳಿಗೆ ಮಾತ್ರ ಅವಕಾಶವಿದ್ದು, ಹಿಂದೆ ಹೆಚ್ಚು ಪ್ರಾತಿನಿಧ್ಯ ನೀಡದವರಿಗೆ ಆದ್ಯತೆ ನೀಡಲಾಗಿದೆ. ಮಹಿಳೆಯರಿಗೂ ಆದ್ಯತೆ ನೀಡಲು ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಸರಿ ಮಾಡುತ್ತೇವೆ’ ಎಂದು ಉತ್ತರಿಸಿದ್ದಾರೆ.



Join Whatsapp