ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಮೇಲೆ ಒಂದರ ಮೇಲೆ ಒಂದು ಪ್ರಹಾರ ನಡೆಸುತ್ತಿದೆ. ಕಲ್ಯಾಣ ಕರ್ನಾಟಕದ ಜನರನ್ನು ಎರಡನೇ ದರ್ಜೆ ನಾಗರೀಕರಂತೆ ನಡೆಸಿಕೊಂಡು ಬಂದಿದ್ದಾರೆ. ಈ ವಿಚಾರವನ್ನು ಹಲವು ಬಾರಿ ಸದನದಲ್ಲಿ ಪ್ರಸ್ತಾಪ ಮಾಡಿದ್ದರೂ, ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತಂದಿದ್ದರೂ ಈ ಭಾಗಕ್ಕೆ 371 ಜೆ ವಿಶೇಷ ಸ್ಥಾನಮಾನತಂದು ಉದ್ಯೋಗ, ಶಿಕ್ಷಣ ಹಾಗೂ ವಿಶೇಷ ಅನುದಾನದಲ್ಲಿ ಈ ಸರ್ಕಾರ ಕಡೆಗಣಿಸಿದೆ. ಆ ಮೂಲಕ ಘನಘೋರ ಅನ್ಯಾಯ ಮಾಡುತ್ತಿದೆ.
ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಜನ ನಿರುದ್ಯೋಗ ಯುವಕರಿದ್ದಾರೆ. ಈ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲಿಲ್ಲ. ರಾಜ್ಯದಲ್ಲಿ ಒಟ್ಟು 2.52 ಲಕ್ಷ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ನೇರ ನೇಮಕಾತಿಗೆ ಸುಮಾರು 30 ಸಾವಿರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದ ಹೊರಗೆ ಇರುವ 2 ಲಕ್ಷ ಖಾಲಿ ಹುದ್ದೆಗಳಲ್ಲಿ ಅದರಲ್ಲಿ ಶೇ.8ರಷ್ಟು ಸಿಗುತ್ತದೆ. ಒಟ್ಟು 50 ಸಾವಿರ ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳು ಖಾಲಿ ಇರುವ ಕಾರಣ ಆ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಈಗ ಸರ್ಕಾರವು ಉದ್ಯೋಗ ಭರ್ತಿ ಮಾಡುವಾಗ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಸಿದ್ಧಪಡಿಸಿಕೊಳ್ಳುವಾಗ ಮೊದಲು ಮಿಕ್ಕುಳಿದ ವೃಂದಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿ, ನಂತರ ಸ್ಥಳೀಯ ವೃಂದದ ಆಯ್ಕೆ ಪಟ್ಟಿ ಸಿದ್ಧ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈ ಜನವಿರೋಧಿ, ಕಲ್ಯಾಣ ಕರ್ನಾಟಕ ವಿರೋಧಿ ಬಿಜೆಪಿ ಸರ್ಕಾರ ಬಂದ ನಂತರ 6-6-2020ರಲ್ಲಿ ಒಂದು ಸುತ್ತೋಲೆ ಹೊರಡಿಸಿ ಅದರಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಿಗುವ ಮೀಸಲಾತಿಯನ್ನು ತಲೆಕೆಳಗಾಗಿಸಿ ಅನ್ಯಾಯ ಮಾಡುವ ರೀತಿಯಲ್ಲಿ ತಿದ್ದುಪಡಿ ತಂದು ಮೊದಲು ಸ್ಥಳೀಯ ವೃಂದದ ಮೆರಿಟ್ ಆಧಾರದ ಆಯ್ಕೆ ಪಟ್ಟಿ ಮಾಡಿ ನಂತರ ಮಿಕ್ಕುಳಿದ ವೃಂದದ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಈ ಆದೇಶ ಬಂದ ನಂತರ ನಾವು ಸಭೆ ಮಾಡಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿಯೋಗವನ್ನು ತೆಗೆದುಕೊಂಡು ಹೋಗಿ, 01-02-2022ರಂದು ದೂರು ಕೊಟ್ಟೆವು. ಅಂದರೆ ಈ ಪಿಎಸ್ ಐ ಹಗರಣ ಬೆಳಕಿಗೆ ಬಂದಿದ್ದು, ನಾವು ಕೊಟ್ಟ ದೂರಿನ ಮೇಲೆ. ನಾವು ದೂರು ಕೊಟ್ಟ ನಂತರ ಈ ಆಯ್ಕೆ ಪ್ರಕ್ರಿಯೆಯನ್ನು ತಡೆಹಿಡಿಯಲಾಯಿತು. ನಂತರ ಇಷ್ಟು ಬೃಹತ್ ಪ್ರಮಾಣದ ಹಗರಣ ನಡೆದಿದೆ.
ಈ ಸರ್ಕಾರದಲ್ಲಿ ನೇಮಕಾತಿ ಆಗುತ್ತಿಲ್ಲ. ಕೇವಲ, ಲೂಟಿ, ಭ್ರಷ್ಟಾಚಾರ ನಡೆಯುತ್ತಿದೆ. ಕೆಪಿಎಶ್ ಸಿ ವತಿಯಿಂದ 2019-20ರಲ್ಲಿ 1000 ಹುದ್ದೆಗಳಿಗೆ ಸಂದರ್ಶನ ಕರೆಯಲಾಗಿದ್ದು, 2022ರಲ್ಲಿ ತಾತ್ಕಾಲಿಕ ಪಟ್ಟಿ ಘೋ,ಣೆ ಮಾಡಿದ್ದು, ಅಂತಿಮ ಪಟ್ಟಿ ಪ್ರಕಟಿಸುವ ಮುನ್ನ ನಾವು ಅಭ್ಯರ್ಥಿಗಳು ಕೊಟ್ಟ ದೂರನ್ನು ಕೊಟ್ಟಿದ್ದೇವೆ. 2016ರ ಸುತ್ತೋಲೆಯಂತೆ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂಬ ನಮ್ಮ ಬೇಡಿಕೆ ನಂತರ ಇದನ್ನು ಸರಿಪಡಿಸುತ್ತೇವೆ ಎಂದು ಹೇಳಲಾಗಿತ್ತು. ಆದರೆ ಇಂದು ಶ್ರೀರಾಮುಲು ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆದಿದ್ದು, ನಮಗೂ ಕರೆದಿದ್ದರು. ನಾವು ಮನವಿ ಮಾಡಿ 4 ತಿಂಗಳಾದರೂ ಇನ್ನು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ದುರುದ್ದೇಶದಿಂದ ವಿಳಂಬ ಮಾಡುತ್ತಿದ್ದು, ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಕು, ಅವರನ್ನು ಹುದ್ದೆಗಳಿಂದ ವಂಚಿತ ಮಾಡಬೇಕು ಎಂಬ ಹುನ್ನಾರ ಈ ಸರ್ಕಾರದ್ದಾಗಿದೆ. 2016ರ ಸುತ್ತೋಲೆ ಪ್ರಕಾರ ನೇಮಕಾತಿ ಮಾಡಿದ್ದರೆ ಇನ್ನು 135 ಎಫ್ ಡಿಎ ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಿವೆ.
ಸರ್ಕಾರ ಅಧಿಸೂಚನೆ ಹೊರಡಿಸಿದ್ದು 2016ರ ಪ್ರಕಾರ. ನಂತರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವಾಗ ಈ ಭಾಗದ ಜನರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಿದ್ದಾರೆ. ನಾವು ಅದನ್ನು ಖಂಡಿಸಿದ್ದು, ಇದನ್ನು ಸರಿಪಡಿಸುವುದಾಗಿ ಮಾತು ಕೊಟ್ಟಿದ್ದರೂ ಇದುವರೆಗೆ ಕಾರ್ಯಗತ ಮಾಡಿಲ್ಲ. ಹೀಗಾಗಿ ಸರ್ಕಾರ ಒಂದು ವಾರಗಳ ಒಳಗಾಗಿ ಸರ್ಕಾರ ತನ್ನ ಸುತ್ತೋಲೆಯನ್ನು ಹಿಂಪಡೆದು 2016ರ ಸುತ್ತೋಲೆ ಪ್ರಕಾರ ನೇಮಕಾತಿ ಆದೇಶ ಹೊರಡಿಸದಿದ್ದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು.
ಒಂದೆಡೆ ಬ್ರಹ್ಮಾಂಡ ಭ್ರಷ್ಟಾಚಾರ, ದೇವದುರ್ಗದಲ್ಲಿ ಕಾಲುವೆ ಆಧುನೀಕರಣ ಯೋಜನೆಯಲ್ಲಿ ಶಾಸಕರು ಹಾಗೂ ಮುಖ್ಯ ಇಂಡಿನಿಯರ್ ನಡುವಣ ಆಡಿಯೋ ಸಂಭಾಷಣೆ ಇಡೀ ರಾಜ್ಯ ಕೇಳಿದ್ದು, ಶಾಸಕರೇ ಇಲ್ಲಿ 200 ಕೋಟಿ ನಕಲಿ ಬಿಲ್ ಸೃಷ್ಟಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ನೇಮಕಾತಿ ಹಗರಣ ಇಡೀ ದೇಶದಾದ್ಯಂತ ಸದ್ದು ಮಾಡಿದೆ. ವರ್ಗಾವಣೆ ದಂಧೆ, ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕದಿಂದ ಬೇರೆ ಬೇರೆ ಇಲಾಖೆಗಳಲ್ಲಿನ ನೇಮಕ, ಬೇರೆ ಬೇರೆ ಇಲಾಖೆಗಳಲ್ಲಿನ ಯೋಜನೆಗಳಲ್ಲಿ 40% ಕಮಿಷನ್ ಕುರಿತ ಎಲ್ಲ ಬೆಳವಣಿಗೆ ನೋಡಿದ್ದೇವೆ.
ಇವರ ಭ್ರಷ್ಟಾಚಾರಕ್ಕೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನಿರುದ್ಯೋಗದಿಂದ ಯುವಕರು ಭ್ರಮನಿರಸನಗೊಂಡಿದ್ದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಿಂಚಿತ್ತಾದರೂ ನೈತಿಕೆತೆ ಇದ್ದರೆ, ಭ್ರಷ್ಟಾಚಾರ ತಡೆಯಲು ಇಚ್ಛಾಶಕ್ತಿ ಇದ್ದರೆ ಬಿಬಿಎಂಪಿ ಸೇರಿದಂತೆ ಎಲ್ಲ ಹಗರಣಗಳನ್ನು ಹೈಕೋರ್ಟ್ ನ್ಯಾಯಾಧೀಶರ ತನಿಖಾ ತಂಡದಿಂದ ಪಾರದರ್ಶಕವಾಗಿ ತನಿಖೆ ಮಾಡಿಸಬೇಕು ಎಂದು ನಾವು ಮತ್ತೊಮ್ಮೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ.
ಇನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಅನುದಾನಗಳೆಲ್ಲವೂ ಕೇವಲ ಕಾಗದದ ಮೇಲಿದೆ. ಇದು ಯಾವುದೇ ರೀತಿ ಕಾರ್ಯಗತವಾಗುವುದಿಲ್ಲ. 2020-21ರಲ್ಲಿ ಈ ಭಾಗಕ್ಕೆ ಅನುದಾನ1500 ಕೋಟಿಯಿಂದ 1131 ಕೋಟಿಗೆ ಇಳಿಯಿತು. ಇದುವರೆಗೂ ಈ ಹಣದಲ್ಲಿ ಅರ್ಧದಷ್ಟು ಹಣ ಬಳಕೆಯಾಗಿಲ್ಲ. 2021-22ರಲ್ಲಿ 1500 ಕೋಟಿಯಲ್ಲಿ ಖರ್ಚಾಗಿರುವುದು ಕೇವಲ 400 ಕೋಟಿ ಮಾತ್ರ. 14 ತಿಂಗಳಾದರೂ ಇವರಿಗೆ ಹಣ ವೆಚ್ಚ ಮಾಡಲು ಆಗಿಲ್ಲ. ಇನ್ನು ಈ ವರ್ಷ ಕೇವಲ ಬ್ರೇಕಿಂಗ್ ನ್ಯೂಸ್ ಮಾಡಲು 3 ಸಾವಿರ ಕೋಟಿ ಇಟ್ಟಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗುತ್ತಿದೆ. ನೀರಾವರಿ ಯೋಜನೆಗಳಲ್ಲಿ 2019ರಲ್ಲಿ ಘೋಷಣೆಯಾದ ಯೋಜನೆಗಳಿಗೆ ತಾಂತ್ರಿಕ ಅನುಮೋದನೆ ಆದರೂ ಯಾವುದೇ ಅನುದಾನ ನೀಡಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದೇ ಒಂದು ಮನೆಯನ್ನು ನೀಡಿಲ್ಲ. ಹಿಂದೆ ನೀಡಿದ್ದ ಅಂಬೇಡ್ಕರ್ ಯೋಜನೆ, ಬಸವ ವಸತಿ ಯೋಜನೆಯ ಸಾವಿರಾರು ಬಡ ಫಲಾನುಭವಿಗಳಿಗೆ ಕಂತು ಬಿಡುಗಡೆ ಕೆಲಸವೂ ಆಗಿಲ್ಲ. ಸರ್ಕಾರ ಸಂಪೂರ್ಣವಾಗಿ ವೈಫಲ್ಯವಾಗಿದ್ದು, ಈ ಭಾಗದ ಜನರ ಶಾಪ ತಟ್ಟಲಿದೆ. ಜನ ರೊಚ್ಚಿಗೆದ್ದು ಧಂಗೆ ಏಳುವ ಮುನ್ನ ಸರ್ಕಾರ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು.
ಮಹಾದಾಯಿ ಯಾತ್ರೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾತ್ರೆಯ ರೂಪುರೇಷೆಗೆಳನ್ನು ನಾವು ತಯಾರು ಮಾಡಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಆ ಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದು, ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಮಾಡುತ್ತೇವೆ. ಮಾರ್ಚ್ ತಿಂಗಳಲ್ಲಿ ಕೋವಿಡ್ ನಿಯಮಾವಳಿಗಳಿದ್ದವು, ಮೇಕೆದಾಟು ಪಾದಯಾತ್ರೆ ಆರಂಭವಾಗಿತ್ತು, ಈ ಯಾತ್ರೆ ಯಾವ ರೀತಿ ಮಾಡಬೇಕು ಎಂದು ಎರಡು ಬಾರಿ ಚರ್ಚೆ ಆಗಿದೆ. ರಾಜ್ಯಮಟ್ಟದ ಎಲ್ಲ ನಾಯಕರು ಭಾಗಿಯಾಗುವ ವಿಚಾರ ವ್ಯಕ್ತವಾದ ನಂತರ, ದಿನಾಂಕ ನಿಗದಿ ಮಾಡಿ, ಈ ಯಾತ್ರೆ ಮಾಡುತ್ತೇವೆ. ಈ ಯಾತ್ರೆ ವಿಚಾರದಲ್ಲಿ ಯಾವುದೇ ನಾಯಕತ್ವ ಸಮಸ್ಯೆ ಇಲ್ಲ. ನಮ್ಮಲ್ಲಿ ಯಾವುದೇ ನಾಯಕತ್ವದ ಗೊಂದಲ ಇಲ್ಲ. ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ಸುರ್ಜೆವಾಲ ಅವರು ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿಯಾಗಿ ನಾನಿದ್ದು, ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದು, ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಆ ಭಾಗದ ಎಲ್ಲ ಶಾಸಕರು, ಪರಾಜಿತ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನಾಶಿರ್ವಾದದಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನೆಲ್ಲಾ ಅಭಿವೃದ್ಧಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ’ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರದ ವಿರುದ್ಧ ತಿರುಗಿ ಬೀಳಲು ವಿರೋಧ ಪಕ್ಷವಾಗಿ ಕಾಂಗ್ರೆಸ್ ವಿಫಲವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ವಿರೋಧ ಪಕ್ಷದಲ್ಲಿದ್ದು, ನಮ್ಮ ಜವಾಬ್ದಾರಿ ಅರಿತಿದ್ದು, ಸದನದಲ್ಲಿ ಹಾಗೂ ಸದನದ ಹೊರಗೆ ಪತ್ರಿಕಾಗೋಷ್ಠಿಗಳ ಮೂಲಕ ಪ್ರತಿಭಟನೆ ಮಾಡುವ ಮೂಲಕ ಧ್ವನಿ ಎತ್ತುತ್ತಿದ್ದೇವೆ. 40% ಕಮಿಷನ್, ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯ, ಎಲ್ಲೆಲ್ಲಿ ಸರ್ಕಾರ ಎಡವಿದೆ ಆ ಬಗ್ಗೆ ಧ್ವನಿ ಎತ್ತಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ತಾರ್ತಿಕ ಅಂತ್ಯಕ್ಕೆ ತೆಗೆದುಕೊಂಡ ಹೋಗುವ ಕೆಲಸ ಮಾಡುತ್ತೇವೆ’ ಎಂದರು.