ಮುಂಬೈ: ಬಾಂಬೆ ಹೈಕೋರ್ಟ್ ಇತ್ತೀಚೆಗೆ ವಿವಾಹಿತ ಮಹಿಳೆಯನ್ನು ಮನೆಕೆಲಸ ಮಾಡಲು ಕೇಳುವುದು ಅವಳನ್ನು ಸೇವಕಿಯಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅರ್ಥವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪತಿ ಹಾಗೂ ಆತನ ಪೋಷಕರ ವಿರುದ್ಧ ವಿವಾಹಿತೆಯೊಬ್ಬರು ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಭಾ ಕಂಕನ್ವಾಡಿ ಮತ್ತು ರಾಜೇಶ್ ಪಾಟೀಲ್ ಅವರ ಪೀಠವು ತನ್ನ ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ. ಜೊತೆಗೆ ಮನೆಗೆಲಸ ಮಾಡು ಎನ್ನುವುದು ವಿವಾಹಿತೆಯನ್ನು ಮನೆಗೆಲಸದವರಿಗೆ ಹೋಲಿಸಿದಂತೆ ಅಲ್ಲ ಎಂದು ಎಫ್ಐಆರ್ ಅನ್ನು ರದ್ದುಗೊಳಿಸಿದೆ.
ಮನೆಗೆಲಸ ಮಾಡಲು ಮಹಿಳೆಗೆ ಇಷ್ಟವಿಲ್ಲದಿದ್ದರೆ ವರ ತನ್ನ ಮದುವೆಯ ಬಗ್ಗೆ ಮರುಚಿಂತನೆ ನಡೆಸುವಂತಾಗಲು ಆಕೆ ಅದನ್ನು ಮದುವೆಗೆ ಮುನ್ನವೇ ತಿಳಿಸಬೇಕು ಅಥವಾ ಮದುವೆಯ ಬಳಿಕ ತಿಳಿಸಿದ್ದರೆ ಇಂತಹ ಸಮಸ್ಯೆಯನ್ನು ಆರಂಭದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಪೀಠವು ತಿಳಿಸಿತು.
‘ಮಾನಸಿಕ ಮತ್ತು ದೈಹಿಕ ಕಿರುಕುಳ ’ಶಬ್ದಗಳನ್ನು ಬಳಸಿದ ಮಾತ್ರಕ್ಕೆ ಐಪಿಸಿಯ ಕಲಂ 498ರ ಅಡಿ ವ್ಯಕ್ತಿಯನ್ನು ತಪ್ಪಿತಸ್ಥನೆಂದು ನಿರ್ಧರಿಸುವುದು ಸಾಧ್ಯವಿಲ್ಲ. ಕಿರುಕುಳದಂತಹ ಕೃತ್ಯಗಳನ್ನು ಬಣ್ಣಿಸದಿದ್ದರೆ ಅವು ಕಿರುಕುಳ ಅಥವಾ ಕ್ರೌಯಕ್ಕೆ ಸಮನಾದ ಕೃತ್ಯಗಳು ಎಂದು ನಿರ್ಧರಿಸಲಾಗುವುದಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.
ಮದುವೆಯಾದ ಒಂದು ತಿಂಗಳ ಬಳಿಕ ಕಾರು ಖರೀದಿಗೆ ನಾಲ್ಕು ಲಕ್ಷ ರೂ. ತರುವಂತೆ ಪತಿ ಮತ್ತು ಅತ್ತೆ-ಮಾವ ಆಗ್ರಹಿಸಿದ್ದರು. ತನ್ನ ತಂದೆಗೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಪತಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದ ಎಂದು ಮಹಿಳೆ ಆರೋಪಿಸಿದ್ದಳು.