ICC Under 19 World Cup 2024: ಫೈನಲ್‌ನಲ್ಲಿ ಸೋತ ಭಾರತ

Prasthutha|

ಬೆನೋನಿ: ಕಿರಿಯರ ವಿಶ್ವಕಪ್​ ( ICC Under 19 World Cup 2024) ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 79 ರನ್​ಗಳ ಸೋಲು ಕಂಡಿದೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ ಭಾರತ ವಿವಿಧ ಮಾದರಿಯ ಐಸಿಸಿ ಟ್ರೋಫಿಯಲ್ಲಿ ಸೋಲು ಕಂಡಂತಾಗಿದೆ. 2023ರಲ್ಲಿ ಐಸಿಸಿ ಟೆಸ್ಟ್​​ ಚಾಂಪಿಯನ್​ಶಿಪ್, ನಂತರ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್​ ಫೈನಲ್​ನಲ್ಲೂ ಭಾರತ ಸೋಲು ಕಂಡಿತ್ತು.

- Advertisement -

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 253 ರನ್​ಗಳಿಸಿತ್ತು. ನಾಯಕ ಹ್ಯೂಜ್ ವೀಬ್ಗೆನ್ 48, ಹರ್ಜಾಸ್ ಸಿಂಗ್ 55, ಒಲಿವರ್ ಪೀಕ್ 46 ಮತ್ತು ಹ್ಯಾರಿ ಡಿಕ್ಸೋನ್ 42 ರನ್​ಗಳಿಸಿದ್ದರು.

ಭಾರತದ ಪರ ರಾಜ್ ಲಿಂಬಾನಿ 38ಕ್ಕೆ 3, ನಮನ್ ತಿವಾರಿ 63ಕ್ಕೆ2, ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ತಲಾ ಒಂದು ವಿಕೆಟ್ ಪಡೆದಿದ್ದರು.

- Advertisement -

253ರನ್​ಗಳ ಸುಲಭದ ಗುರಿ ಬೆನ್ನಟ್ಟಿದ ಭಾರತ ತಂಡ ಆಸ್ಟ್ರೇಲಿಯಾ ಬೌಲರ್​ಗಳ ದಾಳಿಗೆ ತತ್ತರಿಸಿತು. ನಿರಂತರವಾಗಿ ಕಳೆದುಕೊಂಡ ಟೀಮ್ ಇಂಡಿಯಾ 43 .5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 174ರನ್​ಗಳಿಸಿ 79 ರನ್​ಗಳ ಸೋಲು ಕಂಡಿತು.

ಬ್ಯಾಟಿಂಗ್​ನಲ್ಲಿ ಕುಸಿತ ಕಂಡ ಭಾರತ

ಆರಂಭಿಕ ಆದರ್ಶ್​ ಸಿಂಗ್ 47 ಹಾಗೂ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮುರುಗನ್ ಅಭಿಷೇಕ್​ 42 ರನ್​ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಬಿಟ್ಟರೆ ಟೂರ್ನಿಯುದ್ದಕ್ಕೂ ಮಿಂಚಿದ್ದ ಯಾವೊಬ್ಬ ಬ್ಯಾಟರ್ ಕೂಡ ಇಂದು ಭಾರತದ ನೆರವಿಗೆ ನಿಲ್ಲಲಿಲ್ಲ. ನಾಯಕ ಉದಯ್​ 8, ಮುಶೀರ್ ಖಾನ್ 22, ಅರ್ಶಿನ್ ಕುಲಕರ್ಣಿ 3, ಕಳೆದ ಪಂದ್ಯದ ಹೀರೋ ಸಚಿನ್ ಧಾಸ್ 9, ಪ್ರಿಯಾಂಶು ಮೊಲಿಯಾ 9, ಅರವೆಲ್ಲಿ ಅವಿನಾಶ್ 0 ರಾಜ್ ಲಿಂಬಾನಿ 0, ನಮನ್ ತಿವಾರಿ ಅಜೇಯ 14ನ ರನ್​ಗಳಿಸಿದರು.

ಆಸೀಸ್​ ಪರ ರಾಫ್ ಮೆಕ್​ಮಿಲನ್ 43ಕ್ಕೆ 3, ಮಹ್ಲಿ ಬಿಯರ್ಡ್ಮನ್ 15ಕ್ಕೆ 3, ಕ್ಯಾಲುಮ್ ವಿಡ್ಲರ್ 35ಕ್ಕೆ 2 ಚಾರ್ಲಿ ಆಯಂಡರ್ಸನ್ ಹಾಗೂ ಟಾಮ್ ಸ್ಟ್ರಾಕರ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

4ನೇ ಟ್ರೋಫಿ ಎತ್ತಿ ಹಿಡಿದ ಆಸ್ಟ್ರೇಲಿಯಾ

ಇನ್ನು 2024ರ ಆವೃತ್ತಿಯನ್ನು ಗೆಲ್ಲುವ ಮೂಲಕ 2018 ಮತ್ತು 2012 ಸೋಲಿಗೆ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೇಡು ತೀರಿಸಿಕೊಂಡಿತು. ಇದಲ್ಲದೆ 4ನೇ ಬಾರಿಗೆ ಐಸಿಸಿ ಅಂಡರ್ 19 ವಿಶ್ವಕಪ್​ ತನ್ನದಾಗಿಸಿಕೊಂಡಿತು. ಆಸ್ಟ್ರೇಲಿಯಾ ತಂಡ 1988, 2002, 2010ರಲ್ಲೂ ಚಾಂಪಿಯನ್ ಆಗಿತ್ತು.



Join Whatsapp