ಅಂಡರ್19 ಮಹಿಳಾ ವಿಶ್ವಕಪ್| ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ

Prasthutha|

ಸೌತ್ ಆಫ್ರಿಕಾದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

- Advertisement -

 ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ7 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್​ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು.

ಮೊದಲ ಓವರ್​ನ ನಾಲ್ಕನೇ ಎಸೆತದಲ್ಲೇ ಲಿಬರ್ಟಿ ಹೀಪ್ (0) ವಿಕೆಟ್ ಪಡೆದು ಟಿಟಾಸ್ ಸಾಧು ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಫಿಯೋನಾ ಹಾಲೆಂಡ್​ (10) ರನ್ನು ಅರ್ಚನಾ ದೇವಿ ಕ್ಲೀನ್ ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೆ ಅದೇ ಓವರ್​ನ ಅಂತಿಮ ಎಸೆತದಲ್ಲಿ ಇಂಗ್ಲೆಂಡ್ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ (4) ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಅರ್ಚನಾ ಯಶಸ್ವಿಯಾದರು.

- Advertisement -

ಇತ್ತ ಕೇವಲ 16 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ತಂಡಕ್ಕೆ ರಯಾನಾ ಮ್ಯಾಕ್​ಡೊನಾಲ್ಡ್ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ 19 ರನ್​ ಬಾರಿಸುವ ಮೂಲಕ ರಯಾನಾ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು.

ಆದರೆ ಮತ್ತೊಂದೆಡೆ ಇಂಗ್ಲೆಂಡ್ ಆಟಗಾರ್ತಿಯರ ಪೆವಿಲಿಯನ್ ಪರೇಡ್ ಮುಂದುವರೆದಿತ್ತು. ಪರಿಣಾಮ 17.1 ಓವರ್​ಗಳಲ್ಲಿ ಇಂಗ್ಲೆಂಡ್ ತಂಡ 68 ರನ್​ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಟಿಟಾಸ್ ಸಾಧು, ಅರ್ಚನಾ ದೇವಿ ಹಾಗೂ ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಕೇವಲ 69 ರನ್​ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ಶಫಾಲಿ ವರ್ಮಾ ಸ್ಪೋಟಕ ಆರಂಭ ಒದಗಿಸಿದರು. ಮೊದಲ 2 ಓವರ್​ಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್ ಬಾರಿಸಿ ಶಫಾಲಿ 16 ರನ್ ಕಲೆಹಾಕಿದ್ದರು. ಆದರೆ ಬಿರುಸಿನ ಆಟಕ್ಕೆ ಮುಂದಾದ ಶಫಾಲಿ 3ನೇ ಓವರ್​ನಲ್ಲಿ ಔಟಾದರು. ಇದರ ಬೆನ್ನಲ್ಲೇ ಶ್ವೇತಾ ಸೆಹ್ರಾವತ್ (5) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಸೌಮ್ಯ ತಿವಾರಿ ಹಾಗೂ ತ್ರಿಶಾ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 10 ಓವರ್​ಗಳಲ್ಲಿ ಟೀಮ್ ಇಂಡಿಯಾ 48 ರನ್​ ಕಲೆಹಾಕಿತು. ಇನ್ನು ಗೆಲುವಿನ ಹೊಸ್ತಿಲಲ್ಲಿದ್ದಾಗ 24 ರನ್​ಗಳಿಸಿದ್ದ ತ್ರಿಶಾ ಔಟಾದರು.

ಅಂತಿಮವಾಗಿ 14 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್​ಗಳಿಸುವ ಮೂಲಕ ಟೀಮ್ ಇಂಡಿಯಾ 7 ವಿಕೆಟ್​ಗಳ ಜಯಭೇರಿ ಬಾರಿಸಿತು. ಈ ಮೂಲಕ ಚೊಚ್ಚಲ ಮಹಿಳಾ ಅಂಡರ್ 19 ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ 5 ಕೋಟಿ ರೂ. ಪ್ರೋತ್ಸಾಹ ಧನ ಘೋಷಿಸಿದ ಬಿಸಿಸಿಐ

ಈ ಗೆಲುವಿನ ಬೆನ್ನಲ್ಲೇ ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ಪ್ರೋತ್ಸಾಹ ಧನ ಘೋಷಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಮಹಿಳಾ ಕ್ರಿಕೆಟ್ ಮುನ್ನುಗ್ಗುತ್ತಿದೆ. ಈ ವಿಶ್ವಕಪ್ ವಿಜಯೋತ್ಸವವು ಮಹಿಳಾ ಕ್ರಿಕೆಟ್ ನ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ. ಈ ಸಂತೋಷದ ಘಳಿಗೆಯಲ್ಲಿ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿಯನ್ನು ಘೋಷಿಸುತ್ತಿರುವುದು ಸಂತೋಷದಾಯಕ ವಿಷಯ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್ ವಿಜೇತ ತಂಡವನ್ನು ಭಾರತ-ನ್ಯೂಜಿಲೆಂಡ್ ನಡುವಣ 3ನೇ ಟಿ20 ಪಂದ್ಯದ ವೇಳೆ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

Join Whatsapp