ಐಸಿಸಿ ಟ್ವೆಂಟಿ-20 ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದ ಅಮೆರಿಕ

Prasthutha|

ಡಲ್ಲಾಸ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಅತಿಥೇಯ ಅಮೆರಿಕ ಕೆನಡಾ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದೆ.

- Advertisement -

ಇದೇ ಮೊದಲ ಬಾರಿಗೆ ಅಮೆರಿಕ ನೆಲದಲ್ಲಿ ಕ್ರಿಕೆಟ್ ವಿಶ್ವಕಪ್ ಆಯೋಜನೆಯಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿಯೇ ತಾನು ಆಡಿ ಗೆದ್ದು ಬೀಗಿದೆ.

ಗ್ರ್ಯಾಂಡ್ ಪ್ರಿಯರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಮೆರಿಕದ ನಾಯಕ ಮೊನಾಂಕ್ ಪಟೇಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಇದರಂತೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆನಡಾ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತ್ತು.

- Advertisement -

ಈ ಗುರಿ ಬೆನ್ನು ಹತ್ತಿದ ಅಮೆರಿಕ ಇನ್ನೂ 14 ಎಸೆತಗಳು ಉಳಿದಿರುವಂತೆಯೇ 17.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿದೆ.

ಆಯರನ್ ಜೋನ್ಸ್ ಕೇವಲ 40 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಬ್ಯಾಟಿಂಗ್‌ನಲ್ಲಿ ಬರೋಬ್ಬರಿ 10 ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಹರಿದು ಬಂತು.

ಸ್ಟೀವನ್ ಟೇಲರ್ (0) ಹಾಗೂ ನಾಯಕ ಮೊನಾಂಕ್ ಪಟೇಲ್ (16) ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡ ಅಮೆರಿಕ ಆತಂಕಕ್ಕೆ ಒಳಗಾಗಿತ್ತು. ಆದರೆ ಮೂರನೇ ವಿಕೆಟ್‌ಗೆ ಆಯಂಡ್ರಿಸ್ ಗೌಸ್ ಅವರೊಂದಿಗೆ ಜೋನ್ಸ್ 131 ರನ್‌ಗಳ ಜೊತೆಯಾಟ ಕಟ್ಟಿದರು. ಗೌಸ್ 46 ಎಸೆತಗಳಲ್ಲಿ 65 ರನ್ ಗಳಿಸಿ (7 ಬೌಂಡರಿ, 3 ಸಿಕ್ಸರ್) ಮಿಂಚಿದರು.

ಬಿರುಸಿನ ಆಟವಾಡಿದ ಜೋನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಅಮೆರಿಕ ಎರಡು ಅಂಕ ಕಲೆ ಹಾಕಿದೆ.

ಕೆನಡಾ ಪರ ಆರಂಭಿಕ ನವನೀತ್ ಧಲಿವಾಲ್ (61) ಹಾಗೂ ನಿಕೊಲಸ್ ಕಿರ್ಟನ್ (51) ಬಿರುಸಿನ ಅರ್ಧಶತಕ ಗಳಿಸಿ ಮಿಂಚಿದರು.

ನವನೀತ್ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಅವರ ಅಮೋಘ ಆಟದಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸೇರಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಿಕೋಲಸ್ ಕೇವಲ 31 ಎಸೆತಗಳಲ್ಲಿ 51 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಆರಂಭಿಕ ಆಯರನ್ ಜಾನ್ಸನ್ (23) ಹಾಗೂ ಶ್ರೇಯಸ್ ಮೊವ್ವಾ (ಅಜೇಯ 32, ಎಸೆತ 16) ಗಳಿಸಿದರು.

ಭಾರತ ಮೂಲದ ಮೊನಾಂಕ್ ಪಟೇಲ್ ಅಮೆರಿಕ ತಂಡಕ್ಕೆ ಹಾಗೂ ಪಾಕಿಸ್ತಾನ ಮೂಲದ ಸಾದ್ ಬಿನ್ ಜಾಫರ್ ಅವರು ಕೆನಡಾ ಬಳಗಕ್ಕೆ ನಾಯಕತ್ವ ವಹಿಸಿದ್ದಾರೆ. ಎರಡೂ ತಂಡಗಳಲ್ಲಿ ಭಾರತ, ಪಾಕ್, ಇಂಗ್ಲೆಂಡ್ ಮತ್ತು ಸ್ಥಳೀಯ ಆಟಗಾರರು ಇದ್ದಾರೆ.

ಅಮೆರಿಕ ತಂಡದಲ್ಲಿ ಚಿಕ್ಕಮಗಳೂರಿನ ಮೂಡಿಗೆರೆಯ ನಾಸ್ತುಷ್ ಕೆಂಜಿಗೆ ಹಾಗೂ ಕೆನಡಾದಲ್ಲಿ ದಾವಣಗೆರೆಯ ಶ್ರೇಯಸ್ ಮೊವ್ವಾ ಇದ್ದಾರೆ.

ಈ ಭರ್ಜರಿ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಸ್ಕೋರ್ ಚೇಸ್​ ಮಾಡಿದ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಅಮೆರಿಕ ತಂಡವು 169 ರನ್​ಗಳನ್ನು ಚೇಸ್ ಮಾಡಿರುವುದು ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯುಎಸ್​ಎ ತಂಡ ಯಶಸ್ವಿಯಾಗಿದೆ.



Join Whatsapp