ಐಸಿಸಿ T-20 ವಿಶ್ವಕಪ್ ಟೂರ್ನಿ : ಮೊದಲ ಪಂದ್ಯದಲ್ಲಿ ಆಸೀಸ್’ಗೆ ಶರಣಾದ ದಕ್ಷಿಣ ಆಫ್ರಿಕಾ

Prasthutha|

ಅಬುಧಾಬಿ : ಐಸಿಸಿ T-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ 5 ವಿಕೆಟ್‌ಗಳ ಅಂತರದಲ್ಲಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

- Advertisement -


ಅಬುಧಾಬಿಯ ಶೇಖ್ ಝಾಯೆದ್ ಮೈದಾನದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು.
ಟಾಸ್ ಸೋತು‌ ಬ್ಯಾಟಿಂಗ್ ಮಾಡಿದ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 118 ರನ್ ಗಳಿಸಲಷ್ಟೇ ಶಕ್ತವಾಯಿತು.ಸುಲಭ ಗುರಿಯನ್ನು ಬೆನ್ನಟ್ಟಲು ತಿಣುಕಾಡಿದ ಆಸ್ಟ್ರೇಲಿಯಾ ಅಂತಿಮ ಓವರ್’ನ ಎರಡು ಎಸೆತ ಬಾಕಿಯಿರುವಾಗ 5 ವಿಕೆಟ್ ನಷ್ಟದಲ್ಲಿ 121 ರನ್’ಗಳಿಸಿ ಗುರಿ ಮುಟ್ಟಿತು.
16ನೇ ಓವರ್’ನಲ್ಲಿ 81 ರನ್’ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾ 5 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ದಕ್ಷಿಣ ಆಫ್ರಿಕಾದ ಪಾಳೆಯದಲ್ಲಿ ಗೆಲುವಿನ ಆಸೆ ಮೂಡಿತ್ತು. ಆದರೆ ನಿರ್ಣಾಯಕ ಓವರ್‌ಗಳಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಆಲ್ ರೌಂಡರ್ ಸ್ಟೋಯ್’ನಿಸ್ ಹಾಗೂ ಕೀಪರ್ ಮ್ಯಾಥ್ಯೂ ವೇಡ್ ಕ್ರಮವಾಗಿ 24 ಹಾಗೂ 15 ರನ್’ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.


ಫಾರ್ಮ್ ಕಂಡುಕೊಳ್ಳಲು ಕಷ್ಟ ಪಡುತ್ತಿರುವ ಡೇವಿಡ್ ವಾರ್ನರ್ 14 ರನ್’ಗಳಿಸಿ ಮರಳಿದರೆ, ಕ್ಯಾಪ್ಟನ್ ಫಿಂಚ್‌ ಶೂನ್ಯ ಸುತ್ತಿದರು. ಸ್ಟೀವ್ ಸ್ಮಿತ್ 35 ಹಾಗೂ ಮ್ಯಾಕ್ಸ್‌ವೆಲ್ 18 ರನ್’ಗಳಿಸಿದರು.
ಇನ್ನು ಇದಕ್ಕೂ ಮೊದಲು‌ ಬ್ಯಾಟ್ ಮಾಡಿದ್ದ ಆಫ್ರಿಕಾದ ಆರಂಭ ಉತ್ತಮವಾಗಿರಲಿಲ್ಲ.
ಆರಂಭಿಕ ಬ್ಯಾಟರ್ಸ್ ವಿಫಲರಾದರೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಐಡೆನ್ ಮಾರ್ಕ್ರಮ್ 40 ರನ್’ಗಳಿಸಿ ತಂಡಕ್ಕೆ ಆಸರೆಯಾದರು.

- Advertisement -


ಡೇವಿಡ್ ಮಿಲ್ಲರ್ 16 ರನ್ ಗಳಿಸಿದರೆ, ಅಂತಿಮ ಓವರ್‌ಗಳಲ್ಲಿ ಬಿರುಸಾಗಿ ಬ್ಯಾಟ್ ಬೀಸಿದ ಬೌಲರ್ ರಬಡಾ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 19 ರನ್’ಗಳಿಸಿ ತಂಡದ ಮೊತ್ತವನ್ನು ಮೂರಂಕಿ ದಾಟಲು ನೆರವಾದರು. 4 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದ ಜೋಶ್ ಹ್ಯಾಝಲ್’ವುಡ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.



Join Whatsapp