ಐಸಿಸಿ ಟಿ20 ವಿಶ್ವಕಪ್: ಇಂದಿನಿಂದ ಸೂಪರ್ 8 ಸೆಣಸಾಟ

Prasthutha|

17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ

- Advertisement -

ಸೇಂಟ್ ವಿನ್ಸೆಂಟ್: 20 ತಂಡಗಳೊಂದಿಗೆ ಆರಂಭಗೊಂಡ 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯಲ್ಲಿ ಎಂಟು ತಂಡಗಳು ಮಾತ್ರ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದು, ಇಂದಿನಿಂದ ಸೂಪರ್ 8 ಸೆಣಸಾಟ ನಡೆಯಲಿದೆ.

ಸೂಪರ್ 8 ಹಂತದಲ್ಲಿ ಆಡಲಿರುವ 8 ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಇಂದು ಜಂಟಿ ಆತಿಥೇಯ ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯೊಂದಿಗೆ ಮುಂದಿನ ಸುತ್ತು ಆರಂಭವಾಗಲಿದೆ.

- Advertisement -

ರೋಹಿತ್ ಶರ್ಮ ಪಡೆ ಸೂಪರ್-8 ಹಂತದ ಮೊದಲು ಗುಂಪಿನಲ್ಲಿ ಸ್ಥಾನ ಪಡೆದಿದೆ. ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ,ಅಘಾನಿಸ್ತಾನ ಹಾಗೂ ಬಾಂಗ್ಲಾದೇಶ ಗುಂಪಿನಲ್ಲಿರುವ ಇತರ ತಂಡಗಳಾಗಿವೆ. ಇನ್ನೊಂದು ಗುಂಪಿನಲ್ಲಿ ಅಮೆರಿಕ, ದ.ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳಿವೆ.

ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ತಂಡವಾಗಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಟೀಮ್ ಇಂಡಿಯಾ ತನ್ನ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನವೇ ಸೂಪರ್-8ಗೆ ಅರ್ಹತೆ ಪಡೆದುಕೊಂಡಿತ್ತು. ಬಲಿಷ್ಠ ಆಸ್ಟ್ರೇಲಿಯಾ, ಅಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನು ಎದುರಿಸಲಿರುವ ಟೀಮ್ ಇಂಡಿಯಾಗೆ ಸೂಪರ್-8 ಹಂತದಲ್ಲಿ ನೈಜ ಸವಾಲು ಎದುರಾಗಲಿದೆ.

ಸೂಪರ್-8 ಹಂತದ ಎಲ್ಲ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದ್ದು, 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಏರಲು ಮೂರು ಹೆಜ್ಜೆ ಗಳು ಮಾತ್ರ ಬಾಕಿ ಇದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಹಾಗೂ ಏಕದಿನ ವಿಶ್ವಕಪ್ ಟುರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ನೋವು ಇನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಕಾಡುತ್ತಿರುವ ನಡುವೆಯೆ ಟೀಮ್ ಇಂಡಿಯಾ ಮತ್ತೊಮ್ಮೆ ಆಸ್ಟ್ರೇಲಿಯಾ ಸವಾಲು ಎದುರಿಸಲು ಸಜ್ಜಾಗಿದೆ. ಜೂನ್ 24ರ ಸೋಮವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸೂಪರ್-8 ಹಂತದಿಂದ ಸೆಮಿಫೈನಲ್‌ಗೇರುವ ಗುಂಪಿನ ನೆಚ್ಚಿನ ತಂಡಗಳಾಗಿವೆ.



Join Whatsapp