ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ ಆಸೆಯನ್ನು ಕೈಬಿಡದ ದಕ್ಷಿಣ ಆಫ್ರಿಕಾ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 6ವಿಕೆಟ್’ಗಳ ಅಂತರದಲ್ಲಿ ಭರ್ಜರಿಯಾಗಿಯೇ ಸೋಲಿಸಿದೆ. ಆ ಮೂಲಕ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡವನ್ನು ಸೆಮಿಫೈನಲ್ ರೇಸ್’ನಿಂದ ಹೊರಗಿಡುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿದೆ.
ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ, ಬಾಂಗ್ಲನ್ನರಿಗೆ ಬ್ಯಾಟ್ ಬಿಟ್ಟುಕೊಟ್ಟಿತ್ತು. ಹರಿಣಗಳ ಬಿಗು ಬೌಲಿಂಗ್ ದಾಳಿಯೆದುರು ಪವಿಲಿಯನ್ ಪರೇಡ್ ನಡೆಸಿದ ಬಾಂಗ್ಲಾ ಬ್ಯಾಟರ್’ಗಳು ಕೇವಲ 84 ರನ್’ಗಳಿಸುವಷ್ಟರಲ್ಲೇ ಆಲೌಟ್ ಆದರು. 27 ರನ್ ಗಳಿಸಿದ ಮೆಹ್ದಿ ಹಸನ್ ಟಾಪ್ ಸ್ಕೋರರ್ ಎನಿಸಿದರು. ಲಿಟನ್ ದಾಸ್ 24 ರನ್’ಗಳಿಸಿದರೆ, ಶಮೀಮ್ ಹುಸೇನ್ 11 ರನ್’ಗಳಿಸುವಷ್ಟರಲ್ಲೇ ಆಟ ಮುಗಿಸಿದರು. 4 ಮಂದಿ ಬ್ಯಾಟರ್’ಗಳು ಶೂನ್ಯ ಸುತ್ತಿದರೆ, ಇಬ್ಬರು ಎರಡಂಕೆಯನ್ನೇ ದಾಟಲಿಲ್ಲ.
ದಕ್ಷಿಣ ಆಫ್ರಿಕಾ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ನೋರ್ಜೆ, 3.2 ಓವರ್’ನಲ್ಲಿ ಕೇವಲ 8 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. 4 ಓವರ್’ನಲ್ಲಿ 20 ರನ್’ ನೀಡಿ 3 ಪ್ರಮುಖ ವಿಕೆಟ್ ಪಡೆದ ಕಗಿಸೊ ರಬಾಡಾ, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ತಬ್ರೇಜ್ ಶಮ್ಸಿ ಎರಡು ವಿಕೆಟ್ ಪಡೆದರು.
84 ರನ್’ಗಳ ಸುಲಭ ಗುರಿಯನ್ನು 13.3 ಓವರ್’ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ತಲುಪಿದ ದಕ್ಷಿಣ ಆಫ್ರಿಕಾ, ಟೂರ್ನಿಯಲ್ಲಿ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಗ್ರೂಪ್-1ರಲ್ಲಿ 4ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆಲುವು ಸಾಧಿಸಿರುವ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್’ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇನ್ನೊಂದು ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 4 ಪಂದ್ಯವನ್ನಾಡಿರುವ ದಕ್ಷಿಣ ಆಫ್ರಿಕಾ 3 ಗೆಲುವಿನ ಮೂಲಕ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 3 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿರುವ ಆಸ್ಟ್ರೆಲಿಯಾ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.