ದುಬೈ: ಐಸಿಸಿ T-20 ವಿಶ್ವಕಪ್ ಟೂರ್ನಿಯ ಬಲಿಷ್ಠರ ನಡುವಿನ ಹಣಾಹಣಿಯಲ್ಲಿ ಇಂಗ್ಲೆಂಡ್ , ಆಸ್ಟ್ರೇಲಿಯಾ ವಿರುದ್ಧ 8 ಓವರ್’ ಗಳು ಬಾಕಿ ಇರುವಂತೆಯೇ 8 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದ ಯಾವುದೇ ಹಂತದಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್’ಗೆ ಸವಾಲಾಗಲೇ ಇಲ್ಲ. ಟಾಸ್ ಗೆದ್ದ ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು.
ನಾಯಕ ಫಿಂಚ್ ಹೊರತು ಪಡಿಸಿ ತಂಡದ ಯಾವುದೇ ಬ್ಯಾಟರ್’ಗಳು ಕ್ರೀಸ್’ನಲ್ಲಿ ನೆಲೆಯೂರಲಿಲ್ಲ. ವಾರ್ನರ್, ಸ್ಮಿತ್, ಮ್ಯಾಕ್ಸ್ ವೆಲ್, ಸ್ಟೋನಿಸ್ ಯಾರೂ ಸಹ ಎರಡು ಅಂಕಿ ದಾಖಲಿಸಲಿಲ್ಲ.
ತಾಳ್ಮೆಯ ಬ್ಯಾಟಿಂಗ್ ನಡೆಸಿದ ಕ್ಯಾಪ್ಟನ್ ಫಿಂಚ್ 49 ಎಸೆತಗಳನ್ನು ಎದುರಿಸಿ 4 ಬೌಂಡರಿಗಳ ನೆರವಿನಿಂದ 44 ರನ್’ಗಳಿಸಿ ಕ್ರಿಸ್ ಜೋರ್ಡಾನ್’ಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 125 ರನ್ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ 3 ಹಾಗೂ ಕ್ರಿಸ್ ವೋಕ್ಸ್ ಹಾಗೂ ಮಿಲ್ಸ್ ತಲಾ 2 ವಿಕೆಟ್ ಪಡೆದರು.
https://t.co/eN7Oww0PuY https://twitter.com/T20WorldCup/status/1454499844974804996?s=20
ಸುಲಭ ಸವಾಲನ್ನು ಚೇಸಿಂಗ್ ಮಾಡುವ ವೇಳೆ ಬಿರುಗಾಳಿಯಾದ ಜಾಸ್ ಬಟ್ಲರ್ ಸಿಕ್ಸರ್-ಬೌಂಡರಿಗಳೊಂದಿಗೆ ಅಬ್ಬರಿಸಿದ, ಆಸ್ಟ್ರೇಲಿಯಾ ಬೌಲರ್’ಗಳ ಬೆವರಿಳಿಸಿದರು. 32 ಎಸೆತಗಳನ್ನು ಎದುರಿಸಿದ ಬಟ್ಲರ್, 5 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 71 ರನ್’ಗಳಿಸಿ ಅಜೇಯರಾಗುಳಿದರು.
ಜೇಸನ್ ರಾಯ್ 22 ರನ್’ಗಳಿಸಿದರೆ, ಜಾನಿ ಬೇರ್ಸ್ಟೋ 16 ರನ್’ಗಳಿಸಿದರು.
ಈ ಗೆಲುವಿನೊಂದಿಗೆ ಆಡಿದ ಮೂರು ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿದ ಇಂಗ್ಲೆಂಡ್, ಗ್ರೂಪ್’-1 ರಲ್ಲಿ ಅಗ್ರಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ ಎರಡು ಗೆಲುವು ದಾಖಲಿಸಿದ್ದು, ರನ್ ರೇಟ್ ಆಧಾರದಲ್ಲಿ ಆಫ್ರಿಕಾ ಅಂಕಪಟ್ಟಿಯಲ್ಲಿ ಎರಡನೇ ಹಾಗೂ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.