ಗದಗ: ಉತ್ತರ ಕರ್ನಾಟಕದವರೇ ಸಿಎಂ ಆಗಿರುವಾಗ ನಾನು ಮುಖ್ಯಮಂತ್ರಿ ಪದವಿಗೆ ಆಸೆ ಪಡುವುದಿಲ್ಲ.ಆದರೆ ನನಗೆ ಇನ್ನೂ 15 ವರ್ಷಗಳ ಕಾಲಾವಕಾಶ ಇದೆ. ಅತ್ಯಂತ ಹಿರಿಯ ರಾಜಕಾರಣಿಯಾಗಿರುವುದರಿಂದ ನಸೀಬು ಚೆನ್ನಾಗಿದ್ರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿ ಮಾತನಾಡಿದ ಅವರು, ನಾನು ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಅಖಂಡ ಕರ್ನಾಟಕದ ನಾಯಕ. ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಮಹದಾಯಿ, ಕಳಸಾ ಬಂಡೂರಿ, ಕೃಷ್ಣ, ಆಲಮಟ್ಟಿ ಭಾಗದ ಅಭಿವೃದ್ಧಿಗೆ ಯಾರೇ ಅಡ್ಡಗಾಲು ಹಾಕಿದರೂ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಭ್ರಷ್ಟಾಚಾರದ ಆರೋಪ ಮಾಡುವ ಕೆಂಪಣ್ಣ, ಸಿದ್ರಾಮಣ್ಣ ಅಥವಾ ಯಾರೇ ಆದರೂ ದಾಖಲೆ ಸಮೇತ ಲೋಕಾಯುಕ್ತ, ಇಡಿ, ಸಿಬಿಐಗೆ ದೂರು ಕೊಡಲಿ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿ ಆಗಿ ತಮ್ಮ ಇತಿಮಿತಿಯೊಳಗೆ ಸರ್ಕಾರದ ತಪ್ಪುಗಳ ಕುರಿತು ಚರ್ಚಿಸಬೇಕು. ಅದು ಬಿಟ್ಟು ಶೇ 40, ಶೇ 50 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಅಂತ ಬೇಡದ ಹೇಳಿಕೆಗಳನ್ನು ನೀಡಬಾರದು. ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಮುಖ್ಯಮಂತ್ರಿಯನ್ನಾಗಲಿ, ವಿರೋಧ ಪಕ್ಷದ ನಾಯಕನನ್ನಾಗಲಿ ಜನರು ರಸ್ತೆಯಲ್ಲಿ ಓಡಾಡಲು ಬಿಡುತ್ತಿರಲಿಲ್ಲ’ ಎಂದು ಚಾಟಿ ಬೀಸಿದರು.