ಮಂಗಳೂರು: ನಾನು ಅಬ್ಬಕ್ಕನ ಊರಲ್ಲಿ ಹುಟ್ಟಿದವಳು. ಸ್ನಾತಕೋತ್ತರ ಪದವಿ ಪಡೆದು ಈಗ ಮಹಿಳಾ ಸಬಲೀಕಣದ ಬಗ್ಗೆ ಪಿಎಚ್.ಡಿ. ಮಾಡುತ್ತಿದ್ದೇನೆ. ಹಾಗಾಗಿ ಈ ಬಿಜೆಪಿಯವರ ಟ್ರೋಲ್ ಗಳಿಗೆಲ್ಲ ಹೆದರುವುದಿಲ್ಲ ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಟೋಲ್ ಗೇಟ್ ತೆರವು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಇವರ ಟ್ರೋಲ್ ವೀಡಿಯೋ ಬಿಜೆಪಿಯವರ ಲಂಚದ ಇಲ್ಲವೇ ಮಂಚದ ವೀಡಿಯೋ ಅಲ್ಲ. ರಘುಪತಿ ಭಟ್ ರಿಂದ ಈಶ್ವರಪ್ಪರವರೆಗೆ ಬಿಜೆಪಿಯವರ ಮಂಚ, ಲಂಚದ ವೀಡಿಯೋ ಬಂದಿದೆ. ಹಾಗಿರುವಾಗ ಈ ಕಾಂತಾರ, ನಾಗವಲ್ಲಿ ವೀಡಿಯೋಗೆಲ್ಲ ಹೆದರುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಘೀ ಶ್ಯಾಮ ಸುದರ್ಶನ ಭಟ್, ಕೆ. ಆರ್. ಶೆಟ್ಟಿ ಮೊದಲಾದವರು ಮಾನಗೆಟ್ಟ ಟ್ರೋಲ್ ಮಾಡುತ್ತಿದ್ದಾರೆ. ಇದು ಅವರ ನಿಜವಾದ ಹೊಲಸು ರೂಪವಾಗಿದೆ ಎಂದು ಪ್ರತಿಭಾ ಕುಳಾಯಿ ಹೇಳಿದರು.
ಹತ್ತು ಜನ ಪೊಲೀಸರು ನನ್ನನ್ನು ಹೋರಾಟದ ವೇಳೆ ಎತ್ತೊಯ್ದ ಪೀಕಲಾಟ ಈ ಸಂಘಿಗಳಿಗೆ ತಮಾಷೆಯ ಸಂಗತಿ ಆಗಿರುವುದು ನೋಡಿದರೆ ಇವರ ಹೊಲಸು ಒಳ ಮುಖವು ಬಹಿರಂಗ ಆಗುತ್ತಿದೆ. ಈ ಬಗ್ಗೆ ಕಮಿಶನರ್ರನ್ನು ಇಂದು ಭೇಟಿ ಮಾಡಿ ಲಿಖಿತ ದೂರು ನೀಡುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.
ಬಿಜೆಪಿಗರ ಮನಮುರುಕುತನ ಈ ಟ್ರೊಲ್ಗಳಲ್ಲಿದೆ. ನನ್ನದು ಜನಪರ ಹೋರಾಟ ಮತ್ತು ಜನಪರ ಕಳಕಳಿ ಆಗಿರುವಾಗ ಇವರ ವಿರುದ್ಧ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ಕಚಡಾ ಭಾಷೆಯಲ್ಲಿ ಮಾತನಾಡುವ ಬಿಜೆಪಿಯವರ ಮನೆಯವರ ಪರಿಸ್ಥಿತಿ ಇನ್ನೆಂತಾ ಕೀಳು ಎಂದು ಅವರು ಪ್ರಶ್ನಿಸಿದರು.
ಕಾಂತಾರ ಒಂದು ಎರಡು ಮೂರು ಅವತಾರ ಎತ್ತಿ ಹೋರಾಡಿದ್ದೇನೆ. ಮುಂದೆ ಕಾಂತಾರ ನಾಲ್ಕು ಐದು ಅವತಾರ ಎತ್ತಿ ಈ ಬಿಜೆಪಿಗರ ಹೂರಣ ಹೊರಗೆಳೆಯಲಿದ್ದೇನೆ. ನನ್ನ ಸಮುದಾಯದ ಪರ ನಿಂತಿದ್ದೇನೆ. ಅವರು ಬಹುತೇಕ ನನ್ನ ಪರ ನಿಂತಿದ್ದಾರೆ. ಯಾರ ದಬ್ಬಾಳಿಕೆಯೂ ಇಲ್ಲಿ ನಡೆಯದು. ಜನಸಾಮಾನ್ಯರ ಸಂಗಡ ನನ್ನ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಾ ಕುಳಾಯಿ ತಿಳಿಸಿದರು.