ಮೈಸೂರು: ನಾನು ಲಿಂಗಾಯತ ಎಂದು ಬಿಜೆಪಿಯವರಿಗೆ ಗೊತ್ತಾಗಿದ್ದರಿಂದ 30 ಕೋಟಿ ರೂ. ಮತ್ತು ಪ್ರಮುಖ ಸಚಿವ ಸ್ಥಾನದ ಆಫರ್ ಬಂದಿತ್ತು. ಆದರೆ ನಾನು ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ನಲ್ಲೆ ಉಳಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ವರ್ಗದ ಮುಖಂಡರ ಜೊತೆ ಗುರುತಿಸಿಕೊಂಡಿರುವ ನಾನು ವೀರಶೈವ ಲಿಂಗಾಯತ ಸಮಾಜದವನು ಎಂದು ಅನೇಕರಿಗೆ ತಿಳಿದಿರಲಿಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಆಪರೇಷನ್ ಕಮಲದ ಸಂದರ್ಭದಲ್ಲಿ ಬಿಜೆಪಿ ಸೇರುವಂತೆ ನನಗೂ ಆಫರ್ ಬಂದಿತ್ತು. ಇತರ ಜಾತಿಯ ನಾಯಕರಿಗೆ 15 ಕೋಟಿಯಿಂದ 20 ಕೋಟಿ ಮತ್ತು ಮಂತ್ರಿಗಿರಿ ಆಮಿಷ ಒಡ್ಡಲಾಗಿತ್ತು. ಆದರೆ, ನಾನು ಲಿಂಗಾಯತ ಎಂದು ಗೊತ್ತಾಗಿದ್ದರಿಂದ 30 ಕೋಟಿ ರೂ. ಮತ್ತು ಪ್ರಮುಖ ಸಚಿವ ಸ್ಥಾನದ ಆಫರ್ ಬಂದಿತ್ತು. ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ನಲ್ಲೆ ಉಳಿದೆ ಎಂದು ಹೇಳಿದರು.
ಬಿಜೆಪಿಯಿಂದ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ವಿರೋಧ ಪಕ್ಷಗಳ ನಾಯಕರನ್ನು ರಾಜಕೀಯವಾಗಿ ಮುಗಿಸಲು ಕೇಂದ್ರ ಸರ್ಕಾರವು ಸಾವಿಂಧಾನಿಕ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಆರೋಪಿಸಿದರು.
ಸಿದ್ದರಾಮಯ್ಯ ತಮ್ಮ ಆಡಳಿತದ ಅವಧಿಯಲ್ಲಿ ನಾಡಿನ ಎಲ್ಲ ಸಮಾಜಗಳ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದರು. ಐದು ವರ್ಷಗಳವರೆಗೆ ಉತ್ತಮ ಆಡಳಿತ ನೀಡಿದರು. ನಮ್ಮದೇ ತಪ್ಪಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಾಗಲಿಲ್ಲ. ನಮ್ಮ ಯೋಜನೆಗಳ ಬಗ್ಗೆ ಜನರಿಗೆ ಸರಿಯಾಗಿ ತಿಳಿಸಿದ್ದರೆ ಖಂಡಿತ ಅಧಿಕಾರಕ್ಕೆ ಬರುತ್ತಿದ್ದೆವು’ ಎಂದು ಮುಖಂಡ ಬೆಳಗಾವಿಯ ಮುಖಂಡ ಅಶೋಕ ಪಟ್ಟಣ ಈ ಸಂದರ್ಭದಲ್ಲಿ ತಿಳಿಸಿದರು.