►ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ನನ್ನ ಮನೆ ಮೇಲೆ ಐಟಿ ದಾಳಿ ನಡೆಸಿದೆ ಎಂದ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರ ಕೆ ಸುಬ್ರಹ್ಮಣ್ಯ ರೈ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆ ಮುಂದಿನ ಮರದಲ್ಲಿ ಒಂದು ಕೋಟಿ ರೂ. ಹಣ ಪತ್ತೆಯಾಗಿದೆ.
ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಈ ಹಿನ್ನೆಲೆ ಅಕ್ರಮ ಹಣ ಸಂಗ್ರಹ ಮಾಡಲಾಗಿದಿಯಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಬಗ್ಗೆ ವಿಟ್ಲದ ಚಂದಳಿಕೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸ್ಪಷ್ಟನೆ ನೀಡಿದ ಅಶೋಕ್ ಕುಮಾರ್ ರೈ, ಬಿಜೆಪಿಯವರು ಅಶೋಕ್ ರೈ ಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಮತ್ತು ನನ್ನ ಆತ್ಮಸ್ಥೈರ್ಯ ಕುಗ್ಗಿಸಲು ನನ್ನ ಮನೆಗೆ ಐಟಿ ದಾಳಿ ನಡೆಸಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದರು. ಸತತ ಎರಡು ದಿನಗಳ ಕಾಲ ದಾಳಿ ನಡೆಸಿದ್ದಾರೆ. ನನ್ನನ್ನು ಹೇಗಾದರೂ ಮಾಡಿ ಜೈಲಿಗಟ್ಟಬೇಕು ಎಂದು ಈ ರೀತಿ ಮಾಡಲಾಗಿದೆ. ಆದರೆ ದೇವರು ನನ್ನ ಕೈ ಬಿಟ್ಟಿಲ್ಲ. ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಕೋಟ್ಯಾಂತರ ರೂ. ಆದಾಯ ತೆರಿಗೆ ಕಟ್ಟುತ್ತಿದ್ದೇನೆ. ದೇವರ ಮತ್ತು ಜನರ ಆಶೀರ್ವಾದ ಇರುವರೆಗೂ ನನ್ನನ್ನು ಈ ರೀತಿಯಾಗಿ ಹಣಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.