ಬೆಂಗಳೂರು: ಕಾಡಿಲ್ಲದ ಕಲ್ಯಾಣ ಕರ್ನಾಟಕ ಭಾಗದಿಂದ ಬಂದ ನನಗೆ ಮರಗಿಡಗಳ ಬಗ್ಗೆ ತಿಳಿದಿಲ್ಲ ಎಂದು ಮಲೆನಾಡಿನ ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ. ಆದರೆ, ನಾನು ಅರಣ್ಯ ಸಚಿವರಾದ ಬಳಿಕ ಅವರದೇ ಕ್ಷೇತ್ರ ತೀರ್ಥಹಳ್ಳಿಯ ಮೇಗರವಳ್ಳಿ ವ್ಯಾಪ್ತಿಯ ಕೊಕ್ಕೊಡು ಮತ್ತು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿನ ಅರಣ್ಯ ನಾಶ ತಡೆದಿರುವುದಾಗಿ ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶವಾದ ತೀರ್ಥಹಳ್ಳಿಯ ಮೇಗರವಳ್ಳಿ ಅರಣ್ಯ ಕಚೇರಿ ವ್ಯಾಪ್ತಿಯ ಕೊಕ್ಕೋಡು, ಶಿವಳ್ಳಿ ಗ್ರಾಮದ (ಲ್ಯಾಂಡ್ ಮಾರ್ಕ್ ಹುಲಿ ಗುಡ್ಡ) ಸರ್ವೆ ನಂಬರ್ 80ರಲ್ಲಿ ಮರಗಳನ್ನು ಕಡಿದು, ಬುಡಕ್ಕೆ ಬೆಂಕಿ ಹಚ್ಚಿ ನೆಲಸಮ ಮಾಡಿ ಕಂದಾಯ ಭೂಮಿ ಎಂದು ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಅರಣ್ಯ ನಾಶವಾದರೆ ಗುಡ್ಡ ಕುಸಿಯುವ ಭೀತಿ ಇದೆ ಎಂದು ಮಾಧ್ಯಮ ವರದಿಗಾರರಿಂದ ನಮ್ಮ ಕಚೇರಿಗೆ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಆದೇಶ ನೀಡಲಾಗಿದ್ದು, ಒತ್ತುವರಿ ಮಾಡಿದ್ದ ಭೂಮಿಯನ್ನು ಮರುವಶ ಪಡಿಸಿಕೊಳ್ಳಲಾಗಿರುತ್ತದೆ ಮತ್ತು ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ ಎಂದರು.
ಅದೇ ರೀತಿ ಸೊರಬ ತಾಲ್ಲೂಕಿನ ಮುಟಗುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಳಿಗೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪರಿಭಾವಿತ – ಕಾನು ಅರಣ್ಯದಲ್ಲಿ ಅವಸಾನದ ಅಂಚಿನಲ್ಲಿರುವ ಕೊಡಸೆ, ಕಾಸರಕ, ಅಳಲೆ, ಹೊನ್ನೆ, ತಾರೆಯಂತಹ ಬೆಲೆ ಬಾಳುವ ಮರಗಳನ್ನು ಉರುಳಿಸಿ, ಬುಡಕ್ಕೆ ಬೆಂಕಿ ಹಚ್ಚಿ ಧ್ವಂಸ ಮಾಡಿ, ಜೆಸಿಬಿಗಳಿಂದ ನೆಲ ಮಟ್ಟ ಮಾಡಿ, ಖಾಸಗಿ ಅಡಿಕೆ ತೋಟ ಮಾಡಲಾಗಿದೆ ಎಂಬ ದೂರು ಬಂದ ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.