ಬೆಂಗಳೂರು: ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಹೇಳಿಕೆಗೆ ಸಚಿವ ಅಶ್ವತ್ಥನಾರಾಯಣ್ ವಿಷಾದ ವ್ಯಕ್ತಪಡಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅಶ್ವಥ್ ನಾರಾಯಣ್ ಅವರು, ಈ ಬಾರಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎಂಬರ್ಥದಲ್ಲಿ ಹೇಳಿದ ಮಾತಿಗೆ “ಕೋವಿ ಹಿಡಿದು ಬನ್ನಿ” ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ನಮಗೆ ಮತಯಂತ್ರವೇ ಕೋವಿ, ಮತದಾರರು ಕಾಂಗ್ರೆಸ್ ವಿರುದ್ದ ಒತ್ತುವ ಒಂದೊಂದು ಮತಗಳೂ ಒಂದೊಂದು ಬುಲೆಟ್ಗಳೇ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಂತಿಮ ಮೊಳೆ ಹೊಡೆಯಲು ಜನತೆಯೇ ತೀರ್ಮಾನಿಸಿದ್ದಾರೆ. ಇತಿಹಾಸ ತಿರುಚಿ, ಟಿಪ್ಪುವಂಥವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಬಿಂಬಿಸಿದ ಕಾಂಗ್ರೆಸ್ ಹಾಗೂ ಅವರಿಗೆ ನನ್ನ ಮಾತನ್ನು ತಿರುಚಿ ಬಿತ್ತರಿಸುವುದು ಐದು ನಿಮಿಷದ ಕೆಲಸ ಎಂದರು.
ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ (ಗ್ರಾಮೀಣ!) ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ. ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ.
ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರ ಸಿಗದೇ, ಮಾನಸಿಕವಾಗಿ ಕುಗ್ಗಿರುವ ಸಿದ್ದರಾಮಯ್ಯ ಅವರಿಗೆ ಕ್ಷುಲ್ಲಕ ವಿಷಯಗಳೇ ಆಸರೆಯಾಗಿದೆ. ಪ್ರಧಾನಿಯವರನ್ನು ನರ ಹಂತಕ ಎನ್ನುವುದು, ಮುಖ್ಯಮಂತ್ರಿ ಅವರಿಗೆ ಮನೆ ಹಾಳಾಗ ಎನ್ನುವುದು ಅವರ ಸಂಸ್ಕೃತಿ ಆಗಿರಬಹುದು ಎಂದರು.
ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತನ್ನಾಡಿದ್ದೇನೆ. ಅದರಿಂದ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.