ಕರ್ನೂಲ್: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟವಾಗುವ ಅರ್ಧ ಗಂಟೆಗೂ ಮೊದಲು ರಾಹುಲ್ ಗಾಂಧಿ ನೂತನ ಅಧ್ಯಕ್ಷರಾಗಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘೋಷಿಸಿ ಹೇಳಿಕೆ ನೀಡಿದ್ದು ವೈರಲ್ ಆಗಿದೆ.
ಆಂಧ್ರಪ್ರದೇಶದ ಕುಲ್ನೂರ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಪಾತ್ರ ಏನು ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನನ್ನ ಪಾತ್ರವನ್ನು ನೂತನ ಅಧ್ಯಕ್ಷರು ನಿರ್ಧರಿಸುತ್ತಾರೆ. ಈ ಬಗ್ಗೆ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರಲ್ಲಿ ಕೇಳಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂಬ ಸೂಚನೆಯನ್ನು ಫಲಿತಾಂಶ ಪ್ರಕಟನೆಯ ಅರ್ಧ ಗಂಟೆಯ ಮೊದಲು ನೀಡಿ ಅಚ್ಚರಿ ಮೂಡಿಸಿದ್ದಾರೆ.
ಇಂದು ಆಂಧ್ರಪ್ರದೇಶದಲ್ಲಿ ಪಕ್ಷದ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ, ಮತ ಎಣಿಕೆ ನಡೆಯುತ್ತಿರುವ ವೇಳೆ ಮಧ್ಯಾಹ್ನ 1.30ಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಧ್ಯಾಹ್ನ 2 ಗಂಟೆಯವರೆಗೂ ಫಲಿತಾಂಶ ಪ್ರಕಟವಾಗಿರಲಿಲ್ಲ.